ADVERTISEMENT

ಗೋಪಾಲಯ್ಯ ಎನ್‌ಕೌಂಟರ್ ಆಗುತ್ತಿದ್ದರು: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 1:06 IST
Last Updated 30 ನವೆಂಬರ್ 2019, 1:06 IST
   

ಬೆಂಗಳೂರು: ‘ನಾನು ಮತ್ತು ದೇವೇಗೌಡರು ಇಲ್ಲದೆ ಇದ್ದರೆ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಯಾವತ್ತೋ ಪೊಲೀಸರು ಅಥವಾ ರೌಡಿಗಳಿಂದಎನ್‌ಕೌಂಟರ್ ಆಗುತ್ತಿ ದ್ದರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಾ.ಗಿರೀಶ್‌ ಕೆ.ನಾಶಿ ಪರವಾಗಿ ಶುಕ್ರವಾರ ರೋಡ್‌ ಶೋ ನಡೆಸಿದರು.

‘ಗೋಪಾಲಯ್ಯಬದಲಾಗುತ್ತಾರೆ ಎಂದು2013ರಲ್ಲಿ ಒಂದು ಅವಕಾಶ ಕೊಟ್ಟೆ. ಮತ್ತೊಮ್ಮೆಯೂ ಅವಕಾಶ ಕೊಟ್ಟೆ. ಆದರೆ ಅವರು ಬದಲಾಗಲಿಲ್ಲ, ನಾನು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ₹ 427 ಕೋಟಿ ಅನುದಾನ ಕೊಟ್ಟೆ. ಆದರೆ ಅವರು ಪಕ್ಷಕ್ಕೇ ದ್ರೋಹ ಬಗೆದು ಹೋದರು’ ಎಂದರು.

ADVERTISEMENT

ವಸತಿ ಸಚಿವ ವಿ.ಸೋಮಣ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ‘ಸೋಮಣ್ಣ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಯಾವಾಗ ಯಾರೆಲ್ಲ ಕಾಲಿಗೆ ಬಿದ್ದರು ಎಂಬುದು ತಿಳಿದಿದೆ. ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ.ಜನತಾ ಬಜಾರ್‌ನಲ್ಲಿಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು.ಈ ವಯಸ್ಸಿನಲ್ಲಿ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದರೆ ಅವರ ವಿರುದ್ಧವೇ ಮಾತನಾಡುತ್ತಾರೆ. ನಿಮ್ಮ ಹಾಗೆ ಪಕ್ಷದಲ್ಲಿ ಬೆಳೆದು ನಂತರ ಪಕ್ಷಕ್ಕೆ ದ್ರೋಹ ಮಾಡಿ ಹೋಗಿಲ್ಲ. ನೀರು ಬಿಡಬೇಡಿ ಎಂದುಅಧಿಕಾರಿಗಳಿಗೆ ಹೇಳಿ, ಕೊನೆಗೆ ಜನರ ಮುಂದೆ ಇನ್ನೂ ನೀರು ಬಿಟ್ಟಿಲ್ವಾ ಅಂತ ನಾಟಕವಾಡುವವರು ನೀವಲ್ಲವೇ’ ಎಂದು ಛೇಡಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿರುದ್ಧವೂ ವ್ಯಂಗ್ಯವಾಡಿದರು. ‘ಸದಾನಂದಗೌಡರು ಸತ್ತ ಮನೆಗೆ ಹೋಗಿ ನಗುತ್ತಾರೆ’ ಎಂದರು. ‘ಬಿಜೆಪಿ ನಾಯಕರಿಗೆ ಕಣ್ಣೀರು ಬರುವುದಿಲ್ಲ, ನಾವು ಬಡ ಕುಟುಂಬದಿಂದ ಬಂದ ವರು. ಬಿಜೆಪಿಯವರ ಹಾಗೆ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಬೆಳೆದಿಲ್ಲ,ಬಡವರನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ’ ಎಂದರು.

ಮಾಹಿತಿ ಕೊಟ್ಟರೆ ಜೀವ ತ್ಯಾಗ ಮಾಡುವೆ: ವಿ. ಸೋಮಣ್ಣ

ಚಿಕ್ಕಬಳ್ಳಾಪುರ: ‘ಸೋಲಿನ ಹತಾಶೆಯಿಂದ ಎಚ್‌.ಡಿ.ಕುಮಾರಸ್ವಾಮಿ ಅವರು ತಲೆ ಕೆಟ್ಟು ಮಾತನಾಡುತ್ತಿದ್ದಾರೆ. ನಾನು ಯಾವ ಬಟ್ಟೆ ಅಂಗಡಿಯಲ್ಲೂ ಇರಲಿಲ್ಲ. ನನಗೆ ಬಟ್ಟೆ ಬಗ್ಗೆಯೂ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಕೊಟ್ಟರೆ, ನಾನು ಒಂದು ಸೆಕೆಂಡಿನಲ್ಲಿ ರಾಜಕೀಯವನ್ನಷ್ಟೇ ಅಲ್ಲ ಜೀವವನ್ನೇ ತ್ಯಾಗ ಮಾಡುತ್ತೇನೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

‘ಸೋಮಣ್ಣ ಅವರು ಜನತಾ ಬಜಾರ್‌ನಲ್ಲಿ ಬಟ್ಟೆ ಕದ್ದವರು’ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಾಲ್ಲೂಕಿನ ಬರಬಂಡಹಳ್ಳಿಯಲ್ಲಿ ತಿರುಗೇಟು ನೀಡಿದ ಸೋಮಣ್ಣ ಅವರು, ‘ನಾನು ನನ್ನದೇ ಆದ ನೆಲೆಗಟ್ಟಿನಲ್ಲಿ ಬದುಕಿ ಬಂದವನು. ಸಂಸ್ಕಾರದಿಂದ ಬೆಳೆದವನು. ದೇವೇಗೌಡರು ಮತ್ತವರ ಕುಟುಂಬವನ್ನು ಹತ್ತಿರದಿಂದ ನೋಡಿದವನು. ಕುಮಾರಸ್ವಾಮಿ ಇನ್ನೂ ಕಣ್ಣೇ ಬಿಟ್ಟಿರಲಿಲ್ಲ. ಆಗಲೇ ನಾನು ರಾಜಕಾರಣಿಯಾಗಿ ಗುರುತಿಸಿಕೊಂಡು ಶಾಸಕ, ಸಚಿವನಾಗಿದ್ದೆ. ಇಂತಹ ಹೇಳಿಕೆ ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.