ADVERTISEMENT

ಲೋಕಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗೆ ಜೆಡಿಎಸ್‌ ಸಿದ್ಧ: ರೇವಣ್ಣ

ಮಂಡ್ಯ ಜೆಡಿಎಸ್‌ನ ಭದ್ರ ಕೋಟೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 19:32 IST
Last Updated 1 ಫೆಬ್ರುವರಿ 2019, 19:32 IST
   

ಬೆಂಗಳೂರು: ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ ವಿಷಯ ಜೆಡಿಎಸ್‌–ಕಾಂಗ್ರೆಸ್‌ ನಾಯಕರ ಮಧ್ಯೆ ಗೊಂದಲ ಸೃಷ್ಟಿಸಿರುವ ಬೆನ್ನಲ್ಲೇ, ‘ಲೋಕಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗೆ ಜೆಡಿಎಸ್‌ ಸಿದ್ಧ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ಅಣ್ಣನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ಹಾಸನ ಕ್ಷೇತ್ರ ಕುರಿತು ಅವರು ಹೇಳಿರಬೇಕು. ಮಂಡ್ಯ ಅಥವಾ ಹಾಸನ ಕ್ಷೇತ್ರ ಬಿಟ್ಟು ಕೊಡಿ ಎಂದು ಕಾಂಗ್ರೆಸ್‌ನವರು ಕೇಳುತ್ತಿದ್ದಾರೆ. ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ’ ಎಂದು ಸ್ಪಷ್ಟ ಪಡಿಸಿದರು.

‘ಮಂಡ್ಯ ಕ್ಷೇತ್ರ ಜೆಡಿಎಸ್‌ನ ಭದ್ರ ಕೋಟೆ. ಕಾರ್ಯಕರ್ತರ ಭಾವನೆ ವಿರುದ್ಧ ಹೋಗಲು ಸಾಧ್ಯವಿಲ್ಲ. ಯಾರೋ ಬಂದು ಹೇಳಿದ ತಕ್ಷಣ ಬಿಟ್ಟುಕೊಡುವುದು ಕಷ್ಟ. ನಮ್ಮ ಪಕ್ಷದವರನ್ನೇ ನಿಲ್ಲಿಸಬೇಕು ಎಂದು ತೀರ್ಮಾನವಾದರೆ ನಿಲ್ಲಿಸುತ್ತೇನೆ’ ಎಂದೂ ಅವರು ಪ್ರತಿಪಾದಿಸಿದರು.

ADVERTISEMENT

‘ನನ್ನ ಮಗ ನಿಖಿಲ್ ಮಂಡ್ಯದಿಂದ ಸ್ಪರ್ಧಿಸುತ್ತಾನೆ ಎಂದು ನಾನಾಗಲಿ, ಅವನಾಗಲಿ ಹೇಳಿಲ್ಲ. ಮಾಧ್ಯಮಗಳೇ ಈ ಸುದ್ದಿಯನ್ನು ಹರಿಯಬಿಡುತ್ತಿವೆ’ ಎಂದರು.

‘ಮಂಡ್ಯದಲ್ಲಿ ಸ್ಪರ್ಧಿಸುವ ಸಲುವಾಗಿ ನಿಖಿಲ್‌ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ ಟಿಕೆಟ್‌ಗಳನ್ನು ಮನೆ ಮನೆಗೆ ಉಚಿತವಾಗಿ ಹಂಚಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಷ್ಟು ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಗೊತ್ತಿದೆ’ ಎಂದರು.

ಎಲ್ಲದಕ್ಕೂ ಸಿದ್ಧ ಎಂದ ರೇವಣ್ಣ:ಗುರುವಾರ ನಡೆದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಹಳೆ ಮೈಸೂರು ಭಾಗದ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬೇಡ ಎಂಬ ಒತ್ತಾಯ ಕೇಳಿಬಂದಿತ್ತು.

ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ,‘ಚುನಾವಣಾ ಮೈತ್ರಿ ಹಾಗೂ ಟಿಕೆಟ್‌ ಹಂಚಿಕೆ ಕುರಿತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ತೀರ್ಮಾನಿಸುತ್ತಾರೆ. ಮೈತ್ರಿ ಆಗಬೇಕು ಎಂಬುದು ನಮ್ಮ ಆಶಯ. ಒಂದು ವೇಳೆ, ಮೈತ್ರಿ ಆಗದಿದ್ದರೆ ಸ್ವತಂತ್ರ ಸ್ಪರ್ಧೆಗೂ ಸಿದ್ಧರಿದ್ದೇವೆ’ ಎಂದರು.

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಸ್ಪರ್ಧೆಗೆ ಕಾಂಗ್ರೆಸ್‌ನ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಾಸನದಲ್ಲಿ ದೇವೇಗೌಡರೇ ಸ್ಪರ್ಧಿಸಲಿ. ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ. ಅವರ ತೀರ್ಮಾನವೇ ಅಂತಿಮ’ ಎಂದರು.

ಜೆಡಿಎಸ್‌ನವರು ಸೀಟು ಕೇಳುವಂತೆ ನಮ್ಮವರೂ ಕೇಳುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಡ ಹಾಕುವುದರಲ್ಲಿ ತಪ್ಪೇನಿಲ್ಲ.

–ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.