ADVERTISEMENT

ಎಚ್‌ಡಿಕೆ ಬಜೆಟ್‌ನಲ್ಲಿ ರಾಮನಗರ ಜಿಲ್ಲೆಗೆ ಹಲವು‌ ಕೊಡುಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 9:35 IST
Last Updated 5 ಜುಲೈ 2018, 9:35 IST
ಎಚ್‌.ಡಿ.ಕುಮಾರಸ್ವಾಮಿ (ಪ್ರಜಾವಾಣಿ ಚಿತ್ರ)
ಎಚ್‌.ಡಿ.ಕುಮಾರಸ್ವಾಮಿ (ಪ್ರಜಾವಾಣಿ ಚಿತ್ರ)   

ರಾಮನಗರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಾವು ಪ್ರತಿನಿಧಿಸುವ ರಾಮನಗರ ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಹಾಗೂ ಚಿತ್ರನಗರಿ ಸ್ಥಾಪನೆಗೆ ಆಸಕ್ತಿ‌ ತೋರಿದ್ದು, ಇದಕ್ಕಾಗಿ ₹40 ಕೋಟಿ ಮೀಸಲಿರಿಸಿದ್ದಾರೆ. ಚಲನಚಿತ್ರ ಚಟುವಟಿಕೆಗಳಿಗೆ ಸಂಬಂಧಿಸಿದ ವೃತ್ತಿಪರ ತರಬೇತಿಯನ್ನು ಈ ವಿಶ್ವವಿದ್ಯಾಲಯವು ಒಳಗೊಳ್ಳಲಿದೆ.

ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಕಾವೇರಿ‌ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ವಿಚಾರವನ್ನೂ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದು, ಯೋಜನೆಗೆ ಚುರುಕು ಮುಟ್ಟಿಸುವುದಾಗಿ ಭರವಸೆ ನೀಡಿದ್ದಾರೆ.

ರಾಮನಗರದಲ್ಲಿ ₹40 ಕೋಟಿ ವೆಚ್ಚದಲ್ಲಿ 300 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವನ್ನು ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.‌ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ₹70 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಚಾಲ್ತಿಯಲ್ಲಿ ಇದೆ.

ಸಚಿವ ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿ ಹೊಸ‌ ಮೆಡಿಕಲ್ ಕಾಲೇಜು ಸ್ಥಾಪನೆಯ ಘೋಷಣೆ ಹೊರಬಿದ್ದಿದೆ. ಇದಲ್ಲದೆ ರಾಮನಗರದಲ್ಲಿ ಕಲಾ ಮತ್ತು ಕೌಶಲ ಗ್ರಾಮ ನಿರ್ಮಾಣದ‌ ಪ್ರಸ್ತಾವವೂ ಬಜೆಟ್‌ನಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.