ADVERTISEMENT

ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ

ಕೊಡಗು, ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು: ಗೋಕರ್ಣದಲ್ಲಿ ಮನೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST
ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಹೊರಬರಲು ತೊಂದರೆ ಅನುಭವಿಸಿದರು. ಪ್ರಜಾವಾಣಿ ಚಿತ್ರ
ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಹೊರಬರಲು ತೊಂದರೆ ಅನುಭವಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಬಿರುಸಾಗಿದೆ. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಹ ಮಳೆ ಜೋರಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆ ಸುರಿದಿದೆ. ನಗರದ ಪಡೀಲ್‌, ಕೊಟ್ಟಾರ ಚೌಕಿ, ಕೇಂದ್ರ ರೈಲು ನಿಲ್ದಾಣಗಳಲ್ಲಿ ನೀರು ನಿಂತು ವಾಹನ ಸವಾರು, ಜನರು ಪರದಾಡುವಂತಾಯಿತು.

ಕೇಂದ್ರ ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳ ಸಂಪೂರ್ಣ ಜಲಾವೃತಗೊಂಡಿತ್ತು. ರೈಲಿನಿಂದ ಇಳಿದ ಪ್ರಯಾಣಿಕರು ಮನೆಗಳಿಗೆ ತೆರಳುವುದು ದುಸ್ತರವಾಗಿತ್ತು. ಪಡೀಲ್‌ ರೈಲ್ವೆ ಕೆಳಸೇತುವೆಯಲ್ಲಿ ನೀರು ಸಂಗ್ರಹಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೊಟ್ಟಾರ ಚೌಕಿಯ ರಾಜಕಾಲುವೆ ತುಂಬಿ ಹರಿದಿದೆ. ಆದರೆ ಸಂಜೆ ವೇಳೆಗೆ ಮಳೆ ಕಡಿಮೆಯಾಗಿತ್ತು.

ADVERTISEMENT
ಕಾರವಾರದಲ್ಲಿ ಹಳೆಯ ಕಟ್ಟಡದ ಗೋಡೆ ಶುಕ್ರವಾರ ಕುಸಿದ ಆಟೊ ರಿಕ್ಷಾ ಜಖಂ ಆಗಿರುವುದು.

ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಗುರುವಾರ ತಡರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಬಿರುಸಿನ ಮಳೆ ಸುರಿದಿದೆ.

ಮೂಡಿಗೆರೆ ತಾಲ್ಲೂಕಿನ ಭೈರಿಗದ್ದೆ ಗ್ರಾಮದ ಸಂಪರ್ಕ ರಸ್ತೆಯ ಮೇಲೆ ಮರ ಬಿದ್ದು ಸಂಚಾರ ಸ್ಥಗಿತವಾಗಿದೆ. ಮಣ್ಣೀಕೆರೆ ಗ್ರಾಮದ ಬಳಿಯೂ ರಸ್ತೆ ಮೇಲೆ ಮರ ಬಿದ್ದಿದ್ದರಿಂದ ಹಳಸೆ– ಜನ್ನಾಪುರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ಶುಕ್ರವಾರ ಸುರಿದ ಮಳೆಗೆ ಶಿರಸಿಯ ಅಶ್ವಿನಿ ವೃತ್ತದ ರಸ್ತೆ ಹೊಳೆಯಂತಾಗಿತ್ತು

ಮನೆಗಳಿಗೆ ನುಗ್ಗಿದ ನೀರು: ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಜೊಯಿಡಾ, ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಅಂಕೋಲಾ ತಾಲ್ಲೂಕುಗಳಲ್ಲಿ ಶುಕ್ರವಾರ ಇಡೀ ದಿನ ಭಾರಿ ಮಳೆ ಸುರಿಯಿತು. ಗೋಕರ್ಣದ ರಥಬೀದಿಯಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿತು.

ಬೆಳಗಾವಿ, ಖಾನಾಪುರದಲ್ಲಿ ಜೋರಾಗಿ ಮಳೆ ಸುರಿದರೆ, ಸಂಕೇಶ್ವರ, ನಿಪ್ಪಾಣಿ, ಎಂ.ಕೆ. ಹುಬ್ಬಳ್ಳಿ, ಹಿರೇಬಾಗೇವಾಡಿ, ಬೈಲಹೊಂಗಲ, ಹುಬ್ಬಳ್ಳಿ, ಹೊಸಪೇಟೆಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆಚುರುಕು ಪಡೆಯುವ ಲಕ್ಷಣ ಕಾಣಿಸುತ್ತಿದೆ. ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಜೋಗ, ರಿಪ್ಪನ್‌ಪೇಟೆ, ಮಾಸ್ತಿಕಟ್ಟೆ, ಸೊರಬ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಮಳೆಯಿಂದ ವಾತಾವರಣ ತಂಪಾಯಿತು. ರಾಯಚೂರು ಜಿಲ್ಲೆಯ ಮುದಗಲ್‌, ಶಕ್ತಿನಗರದಲ್ಲಿ ಉತ್ತಮ ಮಳೆಯಾಗಿದ್ದು, ಇತರೆಡೆ ತುಂತುರು ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.