ADVERTISEMENT

ಹೈಕೋರ್ಟ್‌ | ಡೆಂಗಿ ಪ್ರಕರಣ: ಅಮಿಕಸ್‌ ಕ್ಯೂರಿ ನೇಮಕ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 17:26 IST
Last Updated 24 ಜುಲೈ 2024, 17:26 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬೆಂಗಳೂರು ಮಹಾನಗರವೂ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಡೆಂಗಿ ಜ್ವರ ವ್ಯಾಪಿಸುತ್ತಿರುವುದನ್ನು ತಡೆಯಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವ ನಿಟ್ಟಿನಲ್ಲಿ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಕುರಿತಾದ ಪ್ರಕರಣದಲ್ಲಿ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ (ನ್ಯಾಯಾಲಯಕ್ಕೆ ಸಹಕರಿಸುವ) ಹೈಕೋರ್ಟ್‌ ನೇಮಿಸಿದೆ.

ಡೆಂಗಿ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಈ ಸ್ವಯಂಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ಅರ್ಜಿ ಕುರಿತು ಹೈಕೋರ್ಟ್‌ಗೆ ಅಗತ್ಯ ಸಲಹೆ ಹಾಗೂ ನೆರವು ನೀಡಲು ಕೆ.ಎನ್‌.ಫಣೀಂದ್ರ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಿಸಲಾಗುತ್ತಿದೆ’ ಎಂದು ತಿಳಿಸಿತು. ‘ಅರ್ಜಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಫಣೀಂದ್ರ ಅವರಿಗೆ ಹಸ್ತಾಂತರಿಸಬೇಕು’ ಎಂದು ರಿಜಿಸ್ಟ್ರಿಗೆ ಸೂಚಿಸಿ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿತು.

ADVERTISEMENT

‘ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು, ‘ಬೆಂಗಳೂರು ಮಹಾನಗರವೂ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿ ಡೆಂಗಿ ಹರಡದಂತೆ ತಡೆಯಲು, ರೋಗಿಗಳಿಗೆ ಒದಗಿಸಿರುವ ವೈದ್ಯಕೀಯ ಸೌಲಭ್ಯ, ಜ್ವರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.