ADVERTISEMENT

ಪಿತ್ರಾರ್ಜಿತ ಆಸ್ತಿ | ತಾಯಿಯೂ ಪಾಲುದಾರಳು: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 16:04 IST
Last Updated 26 ಅಕ್ಟೋಬರ್ 2023, 16:04 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೃತ ಹೊಂದಿದ ಪುತ್ರನ ಆಸ್ತಿಗೆ ತಾಯಿಯು ಮೊದಲನೇ ವರ್ಗದ ವಾರಸುದಾರಳಾಗುತ್ತಾಳೆ ಮತ್ತು ಪತಿ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿ ಪೈಕಿ ಪುತ್ರನಿಗೆ ಸೇರಬೇಕಾದ ಆಸ್ತಿಯಲ್ಲಿ ಆಕೆ ತನ್ನ ಪಾಲು ಪಡೆಯಬಹುದು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಮೃತಪಟ್ಟಿರುವ ಪುತ್ರನ (ಸಂತೋಷ್‌) ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ (ಸುಶೀಲಮ್ಮ) ಹಕ್ಕು ಹೊಂದಿಲ್ಲ’ ಎಂಬ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಟಿ.ಎನ್‌. ಸುಶೀಲಮ್ಮ ಸಲ್ಲಿಸಿದ್ದ ಸಾಮಾನ್ಯ ಎರಡನೇ ಮೇಲ್ಮನವಿಯನ್ನು (ಆರ್‌ಎಸ್‌ಎ) ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ.

ಪ್ರಕರಣವೇನು?: ಸಂತೋಷ್‌ ಪತ್ನಿ ಮತ್ತು ಪುತ್ರ ಪೂರ್ವಜರ ಆಸ್ತಿಯಲ್ಲಿ ಪಾಲು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು. ಈ ಅರ್ಜಿ ವಿಲೇವಾರಿ ಮಾಡುವಾಗ ಸುಶೀಲಮ್ಮ, ‘ಪ್ರಕರಣದಲ್ಲಿ ನನ್ನನ್ನೂ ಪ್ರತಿವಾದಿಯನ್ನಾಗಿ ಮಾಡಬೇಕಿತ್ತು. ಆದರೆ, ಮಾಡಿಲ್ಲ. ಈ ಕುರಿತ ಮನವಿಯನ್ನು ವಿಚಾರಣಾ ಮತ್ತು ಸೆಷನ್ಸ್‌ ನ್ಯಾಯಾಲಯ ಪರಿಗಣಿಸಿಲ್ಲ. ಹೀಗಾಗಿ, ಅವುಗಳ ಆದೇಶ ಅಕ್ರಮವಾಗಿದ್ದು ನನಗೆ ಅನ್ಯಾಯವಾಗಿದೆ. ಮೇಲ್ಮನವಿದಾರಳಾದ ನಾನು ಮೃತ ಸಂತೋಷ್‌ನ ತಾಯಿಯಾಗಿದ್ದು, ಕಾನೂನುಬದ್ಧವಾಗಿ ಅವನಿಗೆ ಸೇರಬೇಕಾದ ಆಸ್ತಿಯಲ್ಲಿ ನನಗೂ ಪಾಲು ಬರಬೇಕಿದೆ’ ಎಂದು ಕೋರಿದ್ದರು. ಆದರೆ, ಈ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಸುಶೀಲಮ್ಮ ಅವರೂ ನಿಧನ ಹೊಂದಿದ್ದರು.

ADVERTISEMENT

ಪ್ರತಿವಾದಿಗಳ ಪರ ವಕೀಲರು ‘ಸುಶೀಲಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಹಂಚಿಕೆಯಾಗಿಲ್ಲ. ಮೇಲಾಗಿ, ಅವರಿಗೆ ಪಾಲು ಹಂಚಿಕೆ ಮಾಡುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ. ಈ ಹಂತದಲ್ಲಿ ಸುಶೀಲಮ್ಮನ ಪುತ್ರಿಗೆ ಮತ್ತು ಅವರ ಕಾನೂನಾತ್ಮಕ ವಾರಸುದಾರರಿಗೆ ಪಾಲು ಹಂಚಿಕೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ತಾಯಿಯ ಪಾಲಿನಲ್ಲಿ ಪಾಲು ಪಡೆಯಲು ಅರ್ಹರಲ್ಲ. ತಾಯಿಗೆ ಪಾಲು ಹಂಚಿಕೆಯಾಗುವ ಮುನ್ನವೇ ನಿಧನ ಹೊಂದಿರುವ ಕಾರಣ ಸೆಷನ್ಸ್‌ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡುವ ಅಗತ್ಯವಿಲ್ಲ’ ಎಂಬ ವಾದ ಮಂಡಿಸಿದ್ದರು.

ಆದರೆ, ಇದನ್ನು ತಳ್ಳಿ ಹಾಕಿರುವ ಹೈಕೋರ್ಟ್‌, ‘ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಸುಶೀಲಮ್ಮ ನಿಧನರಾಗಿದ್ದು, ಹಿಂದೂ ಮಹಿಳೆಗೆ ಸಂಬಂಧಿಸಿದ ಸಾಮಾನ್ಯ ಉತ್ತರಾಧಿಕಾರ ನಿಯಮಗಳನ್ನು ಹಿಂದೂ ಉತ್ತರಾಧಿಕಾರಿ ಕಾಯ್ದೆ–1956ರ ಕಲಂ 15ರ ಅಡಿಯಲ್ಲಿ ಅನ್ವಯಿಸಿ ನೋಡಬೇಕಿದೆ. ಕಲಂ 16ರ ಅಡಿ ಹಿಂದೂ ಮಹಿಳೆಯ ಆಸ್ತಿಯು ಪುತ್ರರು, ಪುತ್ರಿಯರು (ಹಿಂದೆ ಸಾವನ್ನಪ್ಪಿರುವ ಪುತ್ರ ಅಥವಾ ಪುತ್ರಿಯ ಮಕ್ಕಳೂ ಸೇರಿ) ಮತ್ತು ಪತಿಗೆ ವಿಭಾಗವಾಗುತ್ತದೆ. ಆದ್ದರಿಂದ, ಕಲಂ 15ರ ಪ್ರಕಾರ ಸುಶೀಲಮ್ಮ ಅವರ ಆಸ್ತಿಯು ಪುತ್ರ, ಪುತ್ರಿ ಮತ್ತು ಪತಿಗೆ ವಿಭಾಗವಾಗುತ್ತದೆ ಎಂದು ವಿವರಿಸಿದೆ. ಅಂತೆಯೇ, ಸೆಷನ್ಸ್‌ ನ್ಯಾಯಾಲಯದ ಡಿಕ್ರಿ ಆದೇಶದಲ್ಲಿ ಮಾರ್ಪಾಡು ಮಾಡಿ ಆದೇಶಿಸಿದೆ.

‘ಅರ್ಜಿಯಲ್ಲಿ ಸುಶೀಲಮ್ಮ ಅವರನ್ನು ಒಮ್ಮೆ ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರು ಎನಿಸಲಿದ್ದಾರೆ. ಸಂತೋಷ್‌ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ. ಹೀಗಾಗಿ, ಸಂತೋಷ್‌ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿದಾರರಾದ ಸುಶೀಲಮ್ಮ ಅರ್ಹರು. ಮೊದಲ ಮೇಲ್ಮನವಿ ನ್ಯಾಯಾಲಯದ ನಡೆ ದೋಷಪೂರಿತವಾಗಿದೆ‘ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.