ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ಗ್ರಾಫಿಕ್ ಡಿಸೈನರ್ ಕೆಲಸ ಪಡೆಯಲು ವಿನುತಾ ಎಂಬುವರಿಗೆ ₹1.03 ಕೋಟಿ ಮೊತ್ತವನ್ನು ನೀಡಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶಿಸಿದೆ.
ಈ ಪ್ರಕರಣದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ವಂಚಿಸಿರುವ ಆರೋಪ ಎದುರಿಸುತ್ತಿರುವ ವಿಜಯನಗರದ ಎಂ.ಇ.ವಿನುತಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಜಾ ಕಾಲದ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಮಂಗಳವಾರ ವಿಚಾರಣೆ ನಡೆಸಿದರು.
‘ಈ ಆದೇಶದ ಪ್ರತಿಯನ್ನು ಇಸ್ರೊ ಮುಖ್ಯಸ್ಥರಿಗೆ ಕಳುಹಿಸಬೇಕು’ ಎಂದು ನ್ಯಾಯಾಂಗ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಿದ ನ್ಯಾಯಪೀಠ, ಈ ಕುರಿತ ಸ್ವೀಕೃತಿ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿದೆ.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರಾದ ವಿನುತಾ ಹವ್ಯಾಸಿ ಆರೋಪಿಯಾಗಿದ್ದಾರೆ. ಹಣ ಪಡೆದು ಕೆಲಸ ಕೊಡಿಸುವ ಇನ್ನೂ ಎರಡು ಆರೋಪಗಳು ಇವರ ವಿರುದ್ಧ ಇವೆ. ಅಂತೆಯೇ, ದೂರುದಾರ ಸಂಜಯ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ನಿರ್ದೇಶಿಸಲಾಗುವುದು. ಈ ಎರಡೂ ಪ್ರಕರಣಗಳ ತನಿಖೆ ನಡೆಯಲಿ’ ಎಂದು ಆದೇಶಿಸಿತು.
ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ, ‘ವನಿತಾ ವಿರುದ್ಧ ಕೊಳ್ಳೇಗಾಲ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು’ ಎಂದು ಅರ್ಜಿದಾರರ ಪರ ವಕೀಲರಿಗೆ ತಾಕೀತು ಮಾಡಿದೆ.
ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸರು ಎಂ.ಇ.ವಿನುತಾ ಮತ್ತು ಇತರರನ್ನು ಆರೋಪಿಗಳನ್ನಾಗಿಸಿ, ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್) ಕಲಂ 115(2), 3(2), 318(4), 336(2), 336(3), 340(2), 351(2), 352ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.