ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಯೋಜನಾ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾಗೊಳಿಸಿದ ಪೌರಾಡಳಿತ ನಿರ್ದೇಶನಾಲಯಕ್ಕೆ ಹೈಕೋರ್ಟ್ ₹25 ಸಾವಿರ ದಂಡ ವಿಧಿಸಿದೆ.
ಬೆಂಗಳೂರಿನ ಬಿ.ಎಸ್. ರಾಜೇಶ್ವರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.
‘ಹೆರಿಗೆಗೆ ರಜೆ ಪಡೆಯುವ ಹಕ್ಕನ್ನು ಸಂವಿಧಾನದ ಪರಿಚ್ಛೇದ 42ರಲ್ಲಿ ನೀಡಲಾಗಿದೆ. ರಜೆ ನೀಡುವ ಮೂಲಕ ಮಹಿಳೆಯ ಹಕ್ಕನ್ನು ಸರ್ಕಾರ ಕಾಪಾಡಬೇಕು. ಹೆರಿಗೆ ರಜೆ ನೀಡದೆ ಅವರನ್ನು ಸೇವೆಯನ್ನು ವಜಾಗೊಳಿಸುವ ಮೂಲಕ ಸಂವಿಧಾನದ ಹಕ್ಕನ್ನು ನೀಡದೆ ಉಲ್ಲಂಘಿಸಲಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ವಜಾಗೊಳಿಸಿ 2019ರ ಆ.29ರಂದು ಹೊರಡಿಸಿದ್ದ ಆದೇಶವನ್ನು ಪೀಠ ವಜಾಗೊಳಿಸಿತು. ಮುಂದಿನ ಎರಡು ವಾರಗಳ ಒಳಗೆ ಅರ್ಜಿದಾರರನ್ನು ಸೇವೆಗೆ ಮರು ನಿಯೋಜನೆ ಮಾಡಿಕೊಳ್ಳಬೇಕು. ವಜಾಗೊಳಿಸಿದ ದಿನದಿಂದ ಮರು ನಿಯೋಜನೆಗೊಳ್ಳುವ ತನಕದ ವೇತನದಲ್ಲಿ ಶೇ 50ರಷ್ಟು ಹಿಂಬಾಕಿ ನೀಡಬೇಕು. ದಂಡ ಮೊತ್ತವನ್ನು ಆದೇಶ ಹೊರಡಿಸಿದ ಅಧಿಕಾರಿಯಿಂದ ವಸೂಲಿ ಮಾಡಬೇಕು’ ಎಂದು ತಿಳಿಸಿದೆ.
ರಾಜೇಶ್ವರಿ ಅವರನ್ನು 2009ರಲ್ಲಿ ಗುತ್ತಿಗೆ ಆಧಾರದಲ್ಲಿ ಪೌರಾಡಳಿತ ನಿರ್ದೇಶನಾಲಯ ನೇಮಕ ಮಾಡಿಕೊಂಡಿತ್ತು. ಹೆರಿಗೆ ರಜೆ ಕೋರಿ ಅವರು 2019ರ ಜೂ.11ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ್ದ ನಿರ್ದೇಶನಾಲಯ, ನೋಟಿಸ್ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಹೆರಿಗೆ ಸಂದರ್ಭದಲ್ಲಿ ಕರ್ತವ್ಯಕ್ಕೆ ಅವರು ಹಾಜರಾಗಲಿಲ್ಲ. ಇದರಿಂದ ಅವರನ್ನು ಸೇವೆಯಿಂದ ವಜಾಗೊಳಿಸಿ ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ರಾಜೇಶ್ವರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.