ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ದಂಧೆಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ಹಾಜರಾಗುವಂತೆ ಸೂಚಿಸಿ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ.ಜೋಶಿ ಅವರಿಗೆ ಜಾರಿ ಮಾಡಿದ್ದ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
‘ತನಿಖೆಗೆ ಹಾಜರಾಗುವಂತೆ ಜೂನ್ 15ರಂದು ಜಾರಿ ಮಾಡಿರುವ ನೋಟಿಸ್‌ಗೆ ತಡೆ ನೀಡಬೇಕು’ ಎಂದು ಕೋರಿ ಶ್ರೀನಾಥ್ ಎಂ.ಜೋಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಜೋಶಿ ಪರ ಹೈಕೋರ್ಟ್ ವಕೀಲ ಸಿ.ಎನ್.ಮಹದೇಶ್ವರನ್, ‘ಜೋಶಿ ಮತ್ತು ಪ್ರಕರಣದ ಆರೋಪಿ ನಿಂಗಪ್ಪ ಸಾವಂತ್ ಅವರಿಗೂ ಯಾವುದೇ ಸಂಪರ್ಕವಿಲ್ಲ. ಜೋಶಿ ಅವರ ಸೇವಾ ದಾಖಲೆಗಳಿಗೆ ಸಮಸ್ಯೆ ತಂದೊಡ್ಡುವ ಸಲುವಾಗಿ ಅವರನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ’ ಎಂದು ದೂರಿದರು.
ಇದಕ್ಕೆ ಪ್ರತಿಯಾಗಿ ಲೋಕಾಯುಕ್ತದ ವಿಶೇಷ ಪ್ರಾಸಿಕ್ಯೂಟರ್ ವೆಂಕಟೇಶ ಅರಬಟ್ಟಿ, ‘ನಿಂಗಪ್ಪ ಸಾವಂತ್ ಒಟ್ಟು 35 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದು, ಶ್ರೀನಾಥ್ ಜೋಶಿ ಅವರಿಗೆ ನೀಡಿರುವ ನೋಟಿಸ್‌ಗೆ ತಡೆ ನೀಡಿದರೆ ತನಿಖೆಗೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ, ತನಿಖೆಗೆ ಅನುಮತಿಸಬೇಕು’ ಎಂದು ಕೋರಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣದಲ್ಲಿ ನಿಂಗಪ್ಪ ಸಾವಂತ್ ಉಲ್ಲೇಖಿಸಿರುವ ಇತರೆ 35 ಅಧಿಕಾರಿಗಳ ವಿರುದ್ಧದ ತನಿಖೆ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದೆ.
ಆಕ್ಷೇಪ: ‘ಜೂನ್ 15ರಂದು ಜೋಶಿ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ ಕಲಂ 35(ಎ) ಅಡಿಯಲ್ಲಿ ನೋಟಿಸ್ ಜಾರಿ ಮಾಡಿ, ಜೂನ್ 16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ, ಕಾರಣವನ್ನು ಬಹಿರಂಗಪಡಿಸಿಲ್ಲ. ನೋಟಿಸ್ ಜೊತೆಗೆ ದೂರು ಅಥವಾ ಎಫ್‌ಐಆರ್ ಪ್ರತಿಯನ್ನು ಲಗತ್ತಿಸಿಲ್ಲ. ಎಫ್‌ಐಆರ್ ಅಥವಾ ದೂರಿನಲ್ಲಿ ಜೋಶಿ ಅವರ ಹೆಸರನ್ನೂ ಉಲ್ಲೇಖಿಸಿಲ್ಲ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಪ್ರಕರಣದಲ್ಲಿ ಜೂನ್ 2ರಂದು ಮಾಜಿ ಹೆಡ್ ಕಾನ್‌ಸ್ಟೆಬಲ್ ಹೊಳಲ್ಕೆರೆ ತಾಲ್ಲೂಕು ತಾಳಿಕಟ್ಟೆಯ ನಿಂಗಪ್ಪ ಜಿ.ಅಲಿಯಾಸ್ ನಿಂಗಪ್ಪ ಸಾವಂತ್ (45) ಅವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ -1 ಎಸ್‌ಪಿಯಾಗಿದ್ದ ಶ್ರೀನಾಥ್ ಎಂ.ಜೋಶಿ ಅವರನ್ನು ಲೋಕಾಯುಕ್ತ ಪೊಲೀಸ್ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು.
ಜಾಮೀನು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ದಂಧೆಯಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿರುವ ಲೋಕಾಯುಕ್ತದ ನಿಂಗಪ್ಪ ಸಾವಂತ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧ ನಿಂಗಪ್ಪ ಅವರ ಪತ್ನಿ ಜಿ.ಕೆ.ಚಂದ್ರಕಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ಅರ್ಜಿದಾರರು, ನ್ಯಾಯಾಲಯದ ವ್ಯಾಪ್ತಿ ಪ್ರದೇಶವನ್ನು ತೊರೆಯುವಂತಿಲ್ಲ. ತನಿಖೆಗೆ ಸಹಕರಿಸಬೇಕು. ಈ ಮಧ್ಯಂತರ ಜಾಮೀನು, ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಮತ್ತು ಲೋಕಾಯುಕ್ತ ಪೊಲೀಸರು ಮಾಧ್ಯಮಗಳ ಜೊತೆ ಮಾತನಾಡುವಂತಿಲ್ಲ’ ಎಂಬ ಕಟ್ಟುನಿಟ್ಟಿನ ಷರತ್ತನ್ನೂ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.