ADVERTISEMENT

ನಕಲಿ ವೈದ್ಯರ ಹಾವಳಿ ತಡೆಗಟ್ಟಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:11 IST
Last Updated 16 ಏಪ್ರಿಲ್ 2025, 16:11 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನಕಲಿ ವೈದ್ಯರಿಂದ ಹಳ್ಳಿಗಳ ಮುಗ್ಧ ಜನರ ಜೀವ ಅಪಾಯದಲ್ಲಿದೆ’ ಎಂದು ತೀವ್ರ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ರಾಜ್ಯದಾದ್ಯಂತ ಇರುವ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಕೂಡಲೇ ಮುಂದಾಗಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಖಡಕ್‌ ತಾಕೀತು ಮಾಡಿದೆ.

‘ಖಾಸಗಿ ವೈದ್ಯಕೀಯ ವೃತ್ತಿ ನಡೆಸಲು ಕೋರಿರುವ ನನ್ನ ಅರ್ಜಿಯನ್ನು ಪರಿಗಣಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಕೆ.ಆರ್‌.ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿಯ ಎ.ಎ.ಮುರಳೀಧರ ಸ್ವಾಮಿ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ವೈದ್ಯಕೀಯ ಕ್ಷೇತ್ರದಲ್ಲಿ ಅರ್ಹತೆ ಇಲ್ಲದ ವ್ಯಕ್ತಿಗಳು ನಡೆಸುತ್ತಿರುವ ಕ್ಲಿನಿಕ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ದಿಸೆಯಲ್ಲಿ ಅನುವಾಗುವಂತೆ ಈ ಆದೇಶದ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗೆ ರವಾನಿಸಬೇಕು ಎಂದು ನ್ಯಾಯಪೀಠ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

‘ಅರ್ಜಿದಾರರು ಕೇವಲ ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ. ಭಾರತೀಯ ಪರ್ಯಾಯ ಔಷಧ ಮಂಡಳಿ ನೀಡಿದೆ ಎಂಬ ಪ್ರಮಾಣಪತ್ರ ಹೊಂದಿದ್ದಾರೆ. ಆಯುರ್ವೇದ, ಅಲೋಪತಿ ಅಥವಾ ಯುನಾನಿ ಸೇರಿದಂತೆ ಯಾವುದೇ ವಿಭಾಗದಲ್ಲಿ ಸೂಕ್ತ ಶೈಕ್ಷಣಿಕ ಅರ್ಹತೆ ಹೊಂದಿಲ್ಲ. ಆದರೂ ವೈದ್ಯ ಪದ್ಧತಿ ಅನುಸರಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುವ ಸ್ವಘೋಷಿತ ನಕಲಿ ವೈದ್ಯರು, ದೂರದ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಜನರನ್ನು ವಂಚಿಸುತ್ತಿರುವುದು ವೇದ್ಯವಾಗುತ್ತದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ಮರ ಪ್ರಾಧಿಕಾರ ರಚನೆಗೆ ಆದೇಶ

ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರು ತಿಂಗಳ ಒಳಗಾಗಿ ‘ಮರ ಪ್ರಾಧಿಕಾರ’ ರಚನೆ ಮಾಡಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

‘ರಾಜ್ಯದ ಸ್ಥಳೀಯ ಸಂಸ್ಥೆಗಳ ವ್ಯಾ‌‍ಪ್ತಿಯಲ್ಲಿ ಮರ ಪ್ರಾಧಿಕಾರ ರಚನೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಮಂಗಳೂರಿನ ‘ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ’ದ ಕಾರ್ಯದರ್ಶಿ ಬೆನೆಡಿಕ್ಟ್‌ ಸಿ.ಫರ್ನಾಂಡಿಸ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಯೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ರಾಜ್ಯ ಸರ್ಕಾರ ಈಗಾಗಲೇ ಉತ್ತರ ಕನ್ನಡ ಚಿಕ್ಕಮಗಳೂರು ಚಾಮರಾಜನಗರ ಶಿವಮೊಗ್ಗ ಉಡುಪಿ ಬೆಳಗಾವಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಮರ ಪ್ರಾಧಿಕಾರ ರಚಿಸಿ ಅವುಗಳಿಗೆ ಮುಖ್ಯಸ್ಥರು ಹಾಗೂ ಸದಸ್ಯರನ್ನು ನೇಮಕ ಮಾಡಿ 2018ರ ಜನವರಿ 12ರಂದು ಆದೇಶಿಸಿದೆ.

ಉಳಿದ ಯಾವ್ಯಾವ ಸ್ಥಳೀಯ ಸಂಸ್ಥೆಗಳಲ್ಲಿ ಮರ ಪ್ರಾಧಿಕಾರ ರಚನೆ ಮಾಡಿಲ್ಲವೋ ಅಂತಹ ಕಡೆಗಳಲ್ಲಿ ಮುಂದಿನ ಆರು ತಿಂಗಳ ಒಳಗಾಗಿ ಮರ ಪ್ರಾಧಿಕಾರ ರಚಿಸಬೇಕು’ ಎಂದು ನಿರ್ದೇಶಿಸಿದೆ.

‘ರಾಜ್ಯದಲ್ಲಿ ಹಸಿರು ಹೊದಿಕೆ ಮತ್ತು ಪರಿಸರ ಸುಸ್ಥಿರತೆಯ ಕುಸಿತ ಕಾಣುತ್ತಿದೆ. ಹಾಗಾಗಿ ರಾಜ್ಯದ ಎಲ್ಲಾ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮರ ಪ್ರಾಧಿಕಾರ ರಚನೆ ಮಾಡಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲರಾದ ಅಶ್ವಿನ್‌ ಜ್ಯೋತ್ಸ್ನಾ ಕುಟಿನ್ಹ ಮತ್ತು ಪ್ರೀತೇಶ್‌ ಡಿಸೋಜಾ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.