ADVERTISEMENT

ಐಎಂಎ ವಂಚನೆ ಪ್ರಕರಣ: ಎರಡು ವಾರ ಎಸ್‌ಐಟಿ ವಶಕ್ಕೆ ಮನ್ಸೂರ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:45 IST
Last Updated 3 ಆಗಸ್ಟ್ 2019, 19:45 IST
ಮನ್ಸೂರ್‌ ಖಾನ್‌
ಮನ್ಸೂರ್‌ ಖಾನ್‌   

ಬೆಂಗಳೂರು: ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಐಎಂಎ ಜ್ಯುವೆಲ್ಸ್‌ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ನನ್ನು ಆಗಸ್ಟ್‌ 16ರವರೆಗೆ ತಮ್ಮ ವಶಕ್ಕೆ ಪಡೆಯುವಲ್ಲಿ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಕೊನೆಗೂ ಸಫಲರಾಗಿದ್ದಾರೆ.

ಅನಾರೋಗ್ಯ ನಿಮಿತ್ತ ಇಲ್ಲಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಮನ್ಸೂರ್‌ ಖಾನ್‌ನನ್ನು ಜೈಲಿಗೆ ಮರಳಿ ಕರೆದೊಯ್ಯಲಾಗಿತ್ತು. ಆನಂತರ, ಎಸ್‌ಐಟಿ ದಾಖಲಿಸಿರುವ ಪ್ರಕರಣದಲ್ಲಿ ಸಿಟಿ ಸಿವಿಲ್‌ ಕೋರ್ಟ್‌ನ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣನವರ ಮುಂದೆ ಶನಿವಾರ ಹಾಜರು‍ಪಡಿಸಲಾಯಿತು. ಆರೋಪಿಯನ್ನು ಎರಡು ವಾರ ಎಸ್‌ಐಟಿ ವಶಕ್ಕೆ ಒಪ್ಪಿಸಲು ನ್ಯಾಯಾಧೀಶರು ಆದೇಶಿಸಿದರು.

ಡಿಐಜಿ ಬಿ.ಆರ್‌. ರವಿಕಾಂತೇಗೌಡ ಅವರ ನೇತೃತ್ವದ ವಿಶೇಷ ತನಿಖಾದಳದ ತಂಡದಲ್ಲಿರುವ ಎಸಿಪಿ ದರ್ಜೆಯ ಇಬ್ಬರು ಅಧಿಕಾರಿಗಳು ಖುದ್ದು ದುಬೈಗೆ ತೆರಳಿ, ಮನ್ಸೂರ್‌ ಖಾನ್‌ ಮನವೊಲಿಸಿ ಜುಲೈ 19ರಂದು ವಾಪಸ್‌ ಕರೆತಂದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಆರೋಪಿ ಇಳಿಯುತ್ತಿದ್ದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಶಕ್ಕೆ ಪಡೆದು, ಬಂಧಿಸಿದರು.

ADVERTISEMENT

ಎರಡು ವಾರದಿಂದಲೂ ಬಂಧಿತನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಹರಸಾಹಸ ಮಾಡಿದ್ದರು. ಇ.ಡಿ ವಿಚಾರಣೆ ಪ್ರಕ್ರಿಯೆ ಕೊನೆಗೊಳ್ಳುವವರೆಗೂ ಆರೋಪಿಯನ್ನು ವಶಕ್ಕೆ ಪಡೆಯಲು ಎಸ್‌ಐಟಿಗೆ ಸಾಧ್ಯವಾಗಲಿಲ್ಲ. ಮೂರು ದಿನಗಳ ಹಿಂದೆ ವಿಚಾರಣೆ ಮುಗಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಎಸ್‌ಐಟಿ, ಮನ್ಸೂರ್‌ ಖಾನ್‌ನನ್ನು ಸುದೀರ್ಘವಾಗಿ ಪ್ರಶ್ನಿಸಲಿದೆ. ಐಎಂಎ ಕಚೇರಿಗಳ ಮೇಲಿನ ದಾಳಿ ವೇಳೆ ವಶಪಡಿಸಿಕೊಂಡ ಮಹತ್ವದ ದಾಖಲೆಗಳ ಬಗ್ಗೆ ಹೇಳಿಕೆ ಪಡೆಯಲಿದೆ. ವಂಚನೆ ವ್ಯವಹಾರಕ್ಕೆ ಸಾಥ್‌ ನೀಡಿ ‘ಅಕ್ರಮ ಲಾಭ’ ಪಡೆದಿರುವ ‍ಪ್ರಭಾವಿ ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕುರಿತೂ ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಂದುವರಿದ ಹಿಲೋರಿ ವಿಚಾರಣೆ
ಬೆಂಗಳೂರು ಪೂರ್ವ ವಲಯದ ಡಿಸಿಪಿ ಆಗಿದ್ದ ಅಜಯ್‌ ಹಿಲೋರಿ ಅವರನ್ನು ಶನಿವಾರವೂ ಎಸ್‌ಐಟಿ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿದರು.

ಸದ್ಯ, ಸಿಎಆರ್‌ ಒಂದನೇ ಬೆಟಾಲಿಯನ್‌ ಕಮಾಂಡೆಂಟ್‌ ಆಗಿರುವ ಹಿಲೋರಿ ಅವರನ್ನು ಶುಕ್ರವಾರ ನಾಲ್ಕು ಗಂಟೆ ಕಾಲ ಪ್ರಶ್ನಿಸಲಾಗಿತ್ತು. ಎಸ್‌ಐಟಿ ಮುಖ್ಯಸ್ಥ ರವಿಕಾಂತೇಗೌಡ, ಡಿಸಿಪಿ (ಅಪರಾಧ) ಗಿರೀಶ್‌ ಅವರ ನೇತೃತ್ವದ ತಂಡವು ಪ್ರಶ್ನಿಸಿತು.

ಐಎಂಎ ಕಂಪನಿಗೆ ‘ಕ್ಲೀನ್‌ ಚಿಟ್‌’ ನೀಡಿರುವ ‍ಐಪಿಎಸ್‌ ಅಧಿಕಾರಿಗಳಲ್ಲಿ ಹಿಲೋರಿ ಅವರೂ ಒಬ್ಬರಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಲಾಗಿದೆ. ಈ ಅನುಕೂಲ ಮಾಡಿಕೊಡಲು ‘ಅಕ್ರಮ ಲಾಭ’ ಏನಾದರೂ ಪಡೆಯಲಾಗಿದೆಯೇ ಎಂಬ ಬಗ್ಗೆಯೂ ವಿಚಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.