ADVERTISEMENT

ಕೋವಿಡ್‌ ಹೆಚ್ಚಳ: ಸಿ.ಎಂ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 19:31 IST
Last Updated 28 ಮಾರ್ಚ್ 2021, 19:31 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ    

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ತಡೆಯುವ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವರು ಹಾಗೂ ವಲಯ ಉಸ್ತುವಾರಿಗಳ ಜೊತೆ ಸೋಮವಾರ ಚರ್ಚೆ ನಡೆಸಲಿದ್ದಾರೆ.

ಸಂಜೆ 5 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಈ ಸಭೆ ನಡೆಯಲಿದೆ. ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಸಚಿವರಿಂದ ಅಭಿಪ್ರಾಯ ಪಡೆದು, ಅದನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ.

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಕೊರೊನಾ ಹೆಚ್ಚಳ ಆಗುತ್ತಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ, ಕಂದಾಯ ಮತ್ತು ಶಿಕ್ಷಣ ಸಚಿವರು ಇರುತ್ತೇವೆ. ನಾಗ್ಪುರದಲ್ಲಿ ಲಾಕ್ ಡೌನ್ ಮಾಡಿರುವುದನ್ನು ನೋಡಿದ್ದೇವೆ. ಮಹಾರಾಷ್ಟ್ರದಲ್ಲೂ ಲಾಕ್ ಡೌನ್, ಸೀಲ್ ಡೌನ್ ಗಮನಿಸಿದ್ದೇವೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದು ಹೇಳಿದರು.

ADVERTISEMENT

‘ಕೊರೊನಾ ನಿಯಂತ್ರಕ್ಕೆ ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ. ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ತೀವ್ರ ನಿಗಾ ಇಡಬೇಕಿದೆ. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

‘ಈ ಶೈಕ್ಷಣಿಕ ವರ್ಷದಿಂದ 1ರಿಂದ 9ನೇ ತರಗತಿವರೆಗೆ ಎಲ್ಲರನ್ನೂ ತೇರ್ಗಡೆ ಮಾಡಬೇಕೆಂದು ಸರ್ಕಾರ ಸೂಚಿಸಿದೆ. ಪರೀಕ್ಷೆ ಮಾಡದೆ ತೇರ್ಗಡೆ ಮಾಡುವುದರ ಬಗ್ಗೆ ಗೊತ್ತಿಲ್ಲ. ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡುತ್ತೇನೆ’ ಎಂದು ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.