ADVERTISEMENT

12 ಸಾಧಕರಿಗೆ ಇನ್ಫೋಸಿಸ್ ಆವಿಷ್ಕಾರ ಆರೋಹಣ ಪ್ರಶಸ್ತಿ ಪ್ರದಾನ

ಶೌಚಾಲಯ ಸ್ವಚ್ಛತೆಗಿಳಿದ ಟೆಕ್ಕಿ* ರೋಬಾಟ್‌ ಕೈ ಅಭಿವೃದ್ಧಿಪಡಿಸಿದ ಯುವಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 16:21 IST
Last Updated 26 ಫೆಬ್ರುವರಿ 2019, 16:21 IST
‘ಆರೋಹಣ್‌ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಾಧಕರೊಂದಿಗೆ ತೀರ್ಪುಗಾರರಾದ ಸುಮಿತ್ ವರ್ಮಾನಿ, ಪ್ರೊ. ಅನಿಲ್ ಗುಪ್ತಾ, ಪ್ರೊ ಜಿ.ವಿ.ವಿ ಶರ್ಮಾ, ಪ್ರೊ. ತ್ರಿಲೋಚನ್ ಶಾಸ್ತ್ರಿ, ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಇನ್ಫೊಸಿಸ್‌ನ ಹಿರಿಯ ಉಪಾಧ್ಯಕ್ಷ ವಿನೋದ ಎಚ್.ಆರ್ ಇದ್ದಾರೆ
‘ಆರೋಹಣ್‌ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಾಧಕರೊಂದಿಗೆ ತೀರ್ಪುಗಾರರಾದ ಸುಮಿತ್ ವರ್ಮಾನಿ, ಪ್ರೊ. ಅನಿಲ್ ಗುಪ್ತಾ, ಪ್ರೊ ಜಿ.ವಿ.ವಿ ಶರ್ಮಾ, ಪ್ರೊ. ತ್ರಿಲೋಚನ್ ಶಾಸ್ತ್ರಿ, ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಇನ್ಫೊಸಿಸ್‌ನ ಹಿರಿಯ ಉಪಾಧ್ಯಕ್ಷ ವಿನೋದ ಎಚ್.ಆರ್ ಇದ್ದಾರೆ   

ಬೆಂಗಳೂರು: ಈ 12 ಯುವಕ– ಯುವತಿಯರು ಮಾತಿಗಿಂತ ಕೃತಿಯ ಮೇಲೆ ನಂಬಿಕೆ ಇಟ್ಟವರು. ತಮ್ಮ ಬುದ್ಧಿಮತ್ತೆ, ಕ್ರಿಯಾಶೀಲತೆಯನ್ನು ದೇಶದ ದೀನ–ದಲಿತರು, ಗ್ರಾಮೀಣ ಜನರ ಸಮಗ್ರ ಪರಿವರ್ತನೆಗಾಗಿ ವಿನೂತನ ಆವಿಷ್ಕಾರಗಳ ಮೂಲಕ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಪರಿವರ್ತನೆಗಾಗಿ ಆವಿಷ್ಕಾರಗಳನ್ನು ಮಾಡಿರುವ ಸಾಧಕರಿಗೆ ಮಂಗಳವಾರಇನ್ಫೊಸಿಸ್‌ ಪ್ರತಿಷ್ಠಾನ ‘ಆರೋಹಣ ಪ್ರಶಸ್ತಿ’ ನೀಡಿ ಗೌರವಿಸಿತು. ಪ್ರಶಸ್ತಿಯ ಭಾಗವಾಗಿ ₹ 1.70 ಕೋಟಿ ನಗದು ನೀಡಿತು. ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಮತ್ತು ಭಾರತೀಯ ಆಟಿಕೆಗಳ ಸಂಶೋಧಕ ಮತ್ತು ವಿಜ್ಞಾನ ತಜ್ಞ ಅರವಿಂದ್ ಗುಪ್ತಾ ಪ್ರಶಸ್ತಿಗಳನ್ನು ವಿತರಿಸಿದರು.

ಶೌಚಾಲಯ ಸ್ವಚ್ಛತೆಗೆ ತಂತ್ರಜ್ಞಾನ:
ಸ್ವಪನೀಲ್‌ ಚತುರ್ವೇದಿ, ಇವರು ಅಮೆರಿಕದ ಕಾರು ತಯಾರಿಕಾ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಆದರೆ, ಅವರು ಆ ದೇಶದ ಕಾಯಂ ನಿವಾಸಿ ಸ್ಥಾನಮಾನ, ಉದ್ಯೋಗ ಬಿಟ್ಟು ಭಾರತಕ್ಕೆ ಮರಳಿದರು. ನಗರ ಪ್ರದೇಶಗಳ ಕೊಳೆಗೇರಿಗಳು ಮತ್ತು ಬಡವರು ವಾಸಿಸುವ ಪ್ರದೇಶಗಳ ಶೌಚಾಲಯಗಳ ನೈರ್ಮಲ್ಯ ಕಾರ್ಯಕ್ಕೆ ಚಾಲನೆ ನೀಡಿದರು. ನೈರ್ಮಲ್ಯಕ್ಕಾಗಿ ಮನೋವಿಜ್ಞಾನ, ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಬಳಸಿಕೊಂಡರು. ವಿಶೇಷ ಆ್ಯಪ್‌ ಮತ್ತು ಸೆನ್ಸರ್‌ಗಳನ್ನು ಬಳಸಿಕೊಂಡರು. 5 ವರ್ಷಗಳಲ್ಲಿ 20 ಲಕ್ಷ ಜನ ಬಳಸುವ ಶೌಚಾಲಯಗಳು ನಿತ್ಯವೂ ಸ್ವಚ್ಛತೆ ಕಾಣುವಂತಾಯಿತು.

ADVERTISEMENT

(ಚಿನ್ನದ ಪ್ರಶಸ್ತಿ: ₹ 20 ಲಕ್ಷ)

ಕೈ ಇಲ್ಲದವರಿಗೆ ರೋಬಾಟ್‌ ಕೈ:
ಪ್ರಶಾಂತ್‌ ಗಾಡೆ ರೋಬಾಟ್‌ ತಜ್ಞ. ತನ್ನ ತಜ್ಞತೆ ದೇಶದ ಬಡವರಿಗೆ ಯಾವುದಾದರೂ ರೀತಿಯಲ್ಲಿ ಉಪಯೋಗವಾಗಬೇಕು ಎಂಬುದು ಅವರ ಉದ್ದೇಶವಾಗಿತ್ತು. ಪರಿಚಯದ ಬಾಲಕಿಯೊಬ್ಬಳಿಗೆ ರೋಬಾಟ್ ಚಾಲಿತ ಕೃತಕ ಕೈ ಅಳವಡಿಸಲು ಜರ್ಮನ್ ಕಂಪನಿ ₹ 24 ಲಕ್ಷ ಕೋಟ್‌ ಮಾಡಿತ್ತು. ಇದನ್ನು ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯ ಎಂಬ ಕಾರಣಕ್ಕೆ ತ್ರೀಡಿ ಪ್ರಿಂಟಿಂಗ್‌ ಮತ್ತು ರೋಬಾಟ್‌ ತಜ್ಞತೆ ಬಳಸಿಕೊಂಡು ಕಡಿಮೆ ವೆಚ್ಚದ ಕೃತಕ ಕೈ ಅಭಿವೃದ್ಧಿಪಡಿಸಿದರು. ಮಿದುಳಿನ ಸಂವೇದನೆ ಸ್ವೀಕರಿಸಿ ಕಾರ್ಯ ನಿರ್ವಹಿಸುವ ಸೆನ್ಸರ್‌ ಅಳವಡಿಸಲಾಗಿದ್ದು, ಬೆರಳುಗಳನ್ನು ಮಡಿಸುವ ಮತ್ತು ಬಿಡಿಸುವ ಕಾರ್ಯ ಮಾಡುತ್ತದೆ. 10 ಕೆ.ಜಿ ಭಾರವನ್ನು ಹೊತ್ತೊಯ್ಯಬಹುದು. ರೋಬಾಟ್ ಚಾಲಿತ ಕೈಯನ್ನು ₹ 50 ಸಾವಿರಕ್ಕೆ ನೀಡಬಹುದು ಎನ್ನುತ್ತಾರೆ ಗಾಡೆ.

(ಪ್ಲಾಟಿನಂ ಪ್ರಶಸ್ತಿ: ₹30 ಲಕ್ಷ)

ಸೋಲಾರ್‌ ಇನ್‌ಸೆಕ್ಟ್‌ ಟ್ರ್ಯಾಪ್‌:
ದಾವಣಗೆರೆಯ ಎಂ.ಜಿ ಕರಿಬಸಪ್ಪ ಹೊಲಗಳಲ್ಲಿ ಬೆಳೆಗಳನ್ನು ತಿಂದು ಹಾಕುವ ಕೀಟಗಳನ್ನು ಆಕರ್ಷಿಸಿ ನಾಶಕ್ಕೆ ಕಾರಣವಾಗುವ ಸೋಲಾರ್‌ ಇನೆಸೆಕ್ಟ್‌ ಟ್ರ್ಯಾಪ್‌ ಅಭಿವೃದ್ಧಿಪಡಿಸಿದ್ದಾರೆ. ಮೂಲತಃ ದಾಳಿಂಬೆ ಬೆಳೆಗಾರರಾದ ಕರಿಬಸಪ್ಪ 2015 ರಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಿದರು. ಅದಕ್ಕೂ ಮುನ್ನ ಒಂದು ವರ್ಷ ಕೀಟ ಬಾಧೆಯಿಂದಾಗಿ ಫಸಲು ನಾಶವಾಯಿತು. ₹ 3.50 ಲಕ್ಷ ಖರ್ಚು ಮಾಡಿ ಕೀಟ ನಾಶಕ ಸಿಂಪಡಿಸಿದರೂ ಪ್ರಯೋಜನ ಆಗಲಿಲ್ಲ. ಸಾಲಗಾರರ ಕಾಟದಿಂದ ಆತ್ಮಹತ್ಯೆಗೂ ಮನಸ್ಸು ಮಾಡಿದ್ದರು. ಆದರೆ, ತೋಟದ ಮನೆಯಲ್ಲಿ ನಡೆದ ಸಣ್ಣ ವಿದ್ಯಮಾನ, ಈ ಸಾಧನದ ಆವಿಷ್ಕಾರಕ್ಕೆ ಕಾರಣವಾಯಿತು. ಈ ಸಾಧನದಿಂದ ಪ್ರತಿನಿತ್ಯ ಹೊಲದಲ್ಲಿ ಅರ್ಧ ಕೆ.ಜಿಗೂ ಹೆಚ್ಚು ಕೀಟಗಳು ನಾಶವಾಗುತ್ತಿವೆ. ದಾಳಿಂಬೆ ತೋಟದಲ್ಲಿ ಕೀಟನಾಶಕಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಕೀಟ ನಾಶಕ ಮುಕ್ತ ಕೃಷಿ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಾಗುತ್ತಿದೆ.

(ತೀರ್ಪುಗಾರರ ಪ್ರಶಸ್ತಿ ₹ 5 ಲಕ್ಷ)

ಇತರ ಪ್ರಶಸ್ತಿ ವಿಜೇತರು:

ಪ್ಲಾಟಿನಂ ವಿಭಾಗ:

* ಪರ್ಸನಲ್‌ ಬ್ರೈಲ್‌ ಪ್ರಿಂಟರ್‌: ಖುಷವಂತ್‌ ರೈ ಮತ್ತು ಅಂಜಲಿ ಖುರಾನ(ಪಂಜಾಬ್‌)

ಚಿನ್ನದ ವಿಭಾಗ:

*ಕಲುಷಿತ ಮುಕ್ತಗೊಳಿಸುವ ನೀರಿನ ಹ್ಯಾಂಡ್‌ ಪಂಪ್‌: ಮಯೂರ್‌ ರಾಮರಾವ್‌, ಗೌರವ್‌ ಘನ್‌ಶ್ಯಾಮ್‌, ನಿಲೇಶ್‌ ಲಕ್ಷ್ಮಣ್ ಜಾಧವ್‌(ಮಹಾರಾಷ್ಟ್ರ)

ಬೆಳ್ಳಿ ವಿಭಾಗ:

*ಹ್ಯಾಂಡಿಕೇರ್‌: ಸುಮಂತ್‌ ಮೊದಲಿಯಾರ್‌, ವಿಶ್ರುತ್‌ ಗೌರಂಗ್‌ ಕುಮಾರ್‌ ಭಟ್‌(ಗುಜರಾತ್‌)

* ಶುದ್ಧಗಾಳಿ ಮತ್ತು ಔಷಧ ಸರಬರಾಜು ಮಾಡುವ ಸಾಧನ: ಆಕಾಸ್‌ ಬಂಧನ, ವಾಸು ಕೌಶಿಕ್‌ ಮತ್ತು ರಾಹುಲ್‌ ಗುಪ್ತಾ (ಹರಿಯಾಣ)

ಕಂಚು ವಿಭಾಗ:

* ಕಳೆ ಕೀಳುವ ಸಾಧನ: ಸಹರ್ವಾನ್‌ ಕುಮಾರ್‌ ಬಜ್ಯ (ರಾಜಸ್ತಾನ)

* ಸ್ವಯಂ ಬ್ರೈಲಿ ಕಲಿಕೆ ಸಾಧನ: ಸಂಸ್ಕೃತಿ ದವಳೆ (ಕರ್ನಾಟಕ)

ಪ್ಲಾಟಿನಮ್‌ ವಿಭಾಗದವರಿಗೆ ತಲಾ₹ 30 ಲಕ್ಷ, ಚಿನ್ನದ ವಿಭಾಗ ₹20 ಲಕ್ಷ, ಬೆಳ್ಳಿ ವಿಭಾಗ ₹15 ಲಕ್ಷ, ಕಂಚು ವಿಭಾಗ ₹ 10 ಲಕ್ಷ ಮತ್ತು ತೀರ್ಪುಗಾರರ ಪ್ರಶಸ್ತಿ ಪಡೆದವರಿಗೆ ತಲಾ ₹5 ಲಕ್ಷ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.