ADVERTISEMENT

ಮೋದಿ, ಶಾಗಿಂತಲೂ ರಮೇಶ ಪವರ್‌ಫುಲ್‌ ಆದ್ರಾ?: ಶಾಸಕ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 15:21 IST
Last Updated 13 ಫೆಬ್ರುವರಿ 2020, 15:21 IST
ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ
ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ   

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗಿಂತಲೂ ಸಚಿವ ರಮೇಶ ಜಾರಕಿಹೊಳಿ ಪವರ್‌ಫುಲ್‌ ಆದ್ರಾ?’.

– ‘ಮುಂದಿನ ಮುಖ್ಯಮಂತ್ರಿಯಾಗುವ ಯೋಗ್ಯತೆ ಇದೆ, ತಾಳ್ಮೆ ವಹಿಸಬೇಕು’ ಎಂದು ತಮಗೆ ಹೇಳಿರುವ ಸಹೋದರ ರಮೇಶ ಜಾರಕಿಹೊಳಿ ಅವರನ್ನು ಯಮಕನಮರಡಿ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಕೇಳಿದ್ದು ಹೀಗೆ.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕ ತಹಶೀಲ್ದಾರ್ ಕಚೇರಿಯವರೇ ನಮ್ಮ ಮಾತು ಕೇಳುತ್ತಿಲ್ಲ. ಇನ್ನು ಮುಖ್ಯಮಂತ್ರಿ ಮಾಡುವ ಮಾತು ದೂರವಿದೆ. ಅವರು ನನ್ನನ್ನು ಯಾವ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತಾರೆ, ಅವರಿಗೇನು ಅಧಿಕಾರವಿದೆ? ಇನ್ನೊಂದು ಪಕ್ಷದ ಮುಖಂಡನ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಬಿಜೆಪಿ ಮುಖಂಡರು ಅವರನ್ನು ನಿಯಂತ್ರಿಸಬೇಕು’ ಎಂದರು.

ADVERTISEMENT

‘ಅವರು 20 ವರ್ಷ ಏನೂ ಅಭಿವೃದ್ಧಿ ಮಾಡಿಲ್ಲ. ಮುಂದಿನ 20 ವರ್ಷಗಳಲ್ಲೂ ಅಷ್ಟೆ. ಜಲಸಂಪನ್ಮೂಲ ಖಾತೆ ಅತ್ಯಂತ ಸೂಕ್ಷ್ಮವಾದುದು. ಹೇಗೆ ನಿಭಾಯಿಸುತ್ತಾರೆ ನೋಡೋಣ. ಅಂತರರಾಜ್ಯ ನೀರು ಹಂಚಿಕೆ ವ್ಯಾಜ್ಯಗಳಿವೆ. 30-40 ವರ್ಷಗಳ ಹಳೆಯ ವಿವಾದಗಳಿವೆ. ಅವುಗಳನ್ನು ಹೇಗೆ ಇತ್ಯರ್ಥಪಡಿಸುತ್ತಾರೆ ನೋಡಬೇಕಿದೆ’ ಎಂದರು.

‘ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ವರಿಷ್ಠರು ಬ್ಯುಸಿ ಇದ್ದರು. ಹೀಗಾಗಿ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗಿದೆ. ಹೊಸ ಅಧ್ಯಕ್ಷರ ನೇಮಕವಾಗಬಹುದು ಅಥವಾ ದಿನೇಶ್‌ ಗುಂಡೂರಾವ್ ಅವರೇ ಮುಂದುವರಿಯಲೂಬಹುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.