ADVERTISEMENT

ನಿವೃತ್ತ ಅಧಿಕಾರಿಗಳ ಜತೆ ಕಾಳೆ ಒಡನಾಟ

ಗೌರಿ ಲಂಕೇಶ್‌ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 20:12 IST
Last Updated 4 ಜುಲೈ 2018, 20:12 IST
ಗೌರಿ ಲಂಕೇಶ್
ಗೌರಿ ಲಂಕೇಶ್   

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ, ಮಹಾರಾಷ್ಟ್ರದ ನಾಲ್ವರು ನಿವೃತ್ತ ಅಧಿಕಾರಿಗಳ ಜೊತೆಗೆ ಒಡನಾಟವಿಟ್ಟುಕೊಂಡಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣದಡಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರು ಆರೋಪಿಗಳ ಪೂರ್ವಾಪರವನ್ನು ಎಸ್‌ಐಟಿ ಪತ್ತೆ ಹಚ್ಚುತ್ತಿದೆ.

ಗೌರಿ ಲಂಕೇಶ್ ಹತ್ಯೆಗೂ ಮುನ್ನ ಆರೋಪಿ ಅಮೋಲ್ ಕಾಳೆ, ನಿವೃತ್ತ ಅಧಿಕಾರಿಗಳ ಜೊತೆಗೆ ಹೆಚ್ಚು ಮಾತನಾಡುತ್ತಿದ್ದ ಎಂಬ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿದೆ.

ADVERTISEMENT

‘ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರ ಕಾಳೆ, ಹಿಂದೆ ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ‌. ಅದೇ ಸಂದರ್ಭ ಪುಣೆಯಲ್ಲಿ ನಡೆಯುತ್ತಿದ್ದ ಕೆಲವು ಸಂಘಟನೆಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಅಲ್ಲಿಯೇ ಆತನಿಗೆ ನಿವೃತ್ತ ಅಧಿಕಾರಿಗಳ ಪರಿಚಯ ಆಗಿತ್ತು. ‘ಧರ್ಮದ ಕೆಲಸಕ್ಕೆ ಬಾ’ ಎಂದು ಅವರೇ ಆತನನ್ನು ಕರೆದಿದ್ದರು. ನಂತರ, ಕೆಲಸಕ್ಕೆ ರಾಜೀನಾಮೆ ನೀಡಿ ಆಶ್ರಮವೊಂದರ ಮೂಲಕ ಧರ್ಮದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಕಾಳೆ ಜತೆ ಒಡನಾಟವಿಟ್ಟುಕೊಂಡಿದ್ದವರು ಮಹಾರಾಷ್ಟ್ರದವರು. ಅವರ ಮೇಲೆ ಕಣ್ಣಿಟ್ಟಿದ್ದೇವೆ. ಅವರು ಯಾರು ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸಲಾಗುವುದಿಲ್ಲ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಗೋವಾ ಹಾಗೂ ಮಹಾರಾಷ್ಟ್ರದ ಪುಣೆ, ಸಾಂಗ್ಲಿ ನಗರಗಳಲ್ಲಿ ಆಯೋಜಿಸುತ್ತಿದ್ದ ಸಭೆಗಳಲ್ಲಿ ಆ ನಾಲ್ವರು ನಿರಂತರ
ವಾಗಿ ಪಾಲ್ಗೊಳ್ಳುತ್ತಿದ್ದರು. ಅವರ ಜತೆಗೆ ಕಾಳೆ ಸಹ ಇರುತ್ತಿದ್ದನೆಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕರ್ನಾಟಕದ ಬೆಂಗಳೂರು, ಚಾಮರಾಜನಗರ, ಹುಬ್ಬಳ್ಳಿ, ವಿಜಯಪುರ, ಚಿಕ್ಕಮಗಳೂರು ಸೇರಿದಂತೆ ಹಲವು ನಗರಗಳಲ್ಲೂ ಕಾರ್ಯಕ್ರಮಗಳು ನಡೆದಿ
ದ್ದವು. ಅಲ್ಲಿಯೂ ಆ ನಾಲ್ವರು ಭಾಗವಹಿಸಿದ್ದರು ಎಂಬ ಮಾಹಿತಿ ಇದೆ’ ಎಂದಿವೆ.

‘ಹಿಂದೂ ಧರ್ಮ ಜಾಗೃತಿ ಬಗ್ಗೆ ಆ ಅಧಿಕಾರಿಗಳು ಭಾಷಣ ಮಾಡುತ್ತಿದ್ದರು. ಅದರಿಂದ ಪ್ರಭಾವಿತರಾದ ಹಲವು ಯುವಕರು, ಇಂದಿಗೂ ಆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಆ ಯುವಕರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಮೂಲಗಳು ಹೇಳಿವೆ.

‘ಪ್ರಕರಣದ ಆರೋಪಿಗಳಾದ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌, ವಿಜಯಪುರದ ಪರಶುರಾಮ ವಾಘ್ಮೋರೆ, ಮನೋಹರ್ ದುಂಡಪ್ಪ ಯಡವೆ, ಅಜಿತ್ ಕುಮಾರ್ ಅಲಿಯಾಸ್ ಪ್ರವೀಣ್‌ನಿಗೆ ಆ ಅಧಿಕಾರಿಗಳ ಪರಿಚಯವಿಲ್ಲ. ಇನ್ನೊಬ್ಬ ಆರೋಪಿ ಮಹಾರಾಷ್ಟ್ರದ ಅಮಿತ್ ದೇಗ್ವೇಕರ್‌ಗೆ ಅಧಿಕಾರಿಗಳು ಯಾರು ಎಂಬುದು ಗೊತ್ತಿದೆ. ಆದರೆ, ಹೆಚ್ಚು ಒಡನಾಟವಿಲ್ಲ’ ಎಂದಿವೆ.

‘ಆರೋಪಿ ಜತೆ ಸಂ‍ಪರ್ಕ ಇಟ್ಟುಕೊಂಡಿದ್ದ ಮಾತ್ರಕ್ಕೆ, ಪ್ರಕರಣದಲ್ಲಿ ನಿವೃತ್ತ ಅಧಿಕಾರಿಗಳ ಕೈವಾಡವಿದೆ ಎನ್ನಲಾಗದು. ಆ ನಾಲ್ವರು ನಿವೃತ್ತ ಅಧಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲೆಂದು ವಿಶೇಷ ತಂಡ ರಚಿಸಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

**

‘ಯಾರನ್ನೂ ಬಂಧಿಸಿಲ್ಲ’

‘ಗೌರಿ ಹತ್ಯೆ ಸಂಬಂಧ ಇನ್ನೊಬ್ಬ ಆರೋಪಿಯನ್ನು ಎಸ್‌ಐಟಿ ಬಂಧಿಸಿದೆ’ ಎಂಬ ಸುದ್ದಿ ಗುರುವಾರ ಹರಿದಾಡುತ್ತಿತ್ತು. ಆ ಬಗ್ಗೆ ಮಾತನಾಡಿದ ಎಸ್‌ಐಟಿ ಡಿಸಿಪಿ ಅನುಚೇತ್‌, ‘ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ವಶಕ್ಕೂ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರಕರಣದಲ್ಲಿ ಯಾವ ನಿವೃತ್ತ ಅಧಿಕಾರಿಗಳೂ ಭಾಗಿಯಾಗಿಲ್ಲ. ಆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.