ADVERTISEMENT

ಅನುದಾನಿತ ಶಾಲೆಗಳ ಶಿಕ್ಷಕರ ನೇಮಕ: ಶೀಘ್ರ ನಿರ್ಧಾರಕ್ಕೆ ಬಸವರಾಜ ಹೊರಟ್ಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:18 IST
Last Updated 13 ಡಿಸೆಂಬರ್ 2021, 22:18 IST

ಬೆಳಗಾವಿ(ಸುವರ್ಣ ವಿಧಾನಸೌಧ): ‘ಅನುದಾನಿತ ಶಾಲೆಗಳಲ್ಲಿ 2015ರವರೆಗೆ ಖಾಲಿ ಇರುವ ಎಲ್ಲ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಕುರಿತು ಗುರುವಾರದ (ಡಿ.16) ಒಳಗೆ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಮತ್ತಿತರರು ಕೇಳಿದ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಪರ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘2015ರವರೆಗೆ ಖಾಲಿ ಹುದ್ದೆ ಇದ್ದ 2,081 ಹುದ್ದೆಗಳ ಪೈಕಿ 257 ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ, 12 ಅರ್ಜಿಗಳು ಮಾತ್ರ ಬಂದಿವೆ. ಶಾಲಾ ಆಡಳಿತ ಮಂಡಳಿಗಳು ಹುದ್ದೆಗಳ ನೇಮಕಾತಿ ಕುರಿತು ರಾಜ್ಯಮಟ್ಟದ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು ಸೇರಿದಂತೆ ಕೆಲವು ನಿಯಮಗಳನ್ನು ಪಾಲಿಸಿಲ್ಲ’ ಎಂದರು.

ಆಗ ಮಧ್ಯಪ್ರವೇಶಿಸಿದ ಸಭಾಪತಿ, ‌‘ಆರ್ಥಿಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಚಿವರು ಮತ್ತು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಹುದ್ದೆಗೆ ಭರ್ತಿಗೆ ಸಂಬಂಧಿಸಿ ಪ್ರಶ್ನೆಯನ್ನು ತಡೆಹಿಡಿಯುತ್ತೇನೆ’ ಎಂದರು.

ADVERTISEMENT

ಬಿಜೆಪಿಯ ಪುಟ್ಟಣ್ಣ, ’ ಶಿಕ್ಷಕರ ನೇಮಕಾತಿಗೆ ಇಲಾಖೆಯ ಆಯುಕ್ತರೇ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಶಶೀಲ್ ನಮೋಶಿ, ‘2012ಕ್ಕಿಂತಲೂ ಮೊದಲು ಖಾಲಿ ಇದ್ದ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ನಂತರ ಕೆಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಅನುಮತಿಗೆ ತಡೆ ನೀಡಲಾಗಿದೆ’ ಎಂದರು.

ಬಿಜೆಪಿಯ ಎಸ್.ವಿ. ಸಂಕನೂರ, ‘ಶಿಕ್ಷಣ ಇಲಾಖೆಯ ಸಮಸ್ಯೆಗಳು ಆರ್ಥಿಕ ಇಲಾಖೆಗೆ ಅರ್ಥವಾಗುವುದಿಲ್ಲ. ಸಚಿವರಾದವರು ಮುಖ್ಯಮಂತ್ರಿ ಬಳಿ ಹೋಗಿ ಗಟ್ಟಿ ಧ್ವನಿಯಲ್ಲಿ ಒತ್ತಡ ಹಾಕಿ ಅನುಮತಿ ಪಡೆಯಬೇಕು. ಹತ್ತು ವರ್ಷದಿಂದ ನೇಮಕಾತಿಗೆ ಅನುಮತಿ ನೀಡಿಲ್ಲ. ಚಿನ್ನದ ಪದಕಸಹಿತ ಪದವಿ ಪಡೆದವರು ವಯೋಮಿತಿ ಮೀರುತ್ತಿದೆ. ಸರ್ಕಾರ ವಯೋಮಿತಿ ಸಡಿಲಿಕೆ ನೀಡಿ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಅರುಣ್ ಶಹಾಪುರ, ‘2015ಕ್ಕೂ ಮೊದಲಿನ ಹುದ್ದೆಗಳಿಗೆ ಅನುಮತಿ ನೀಡಿದೆ. ಅನಂತರ ಅನುಮತಿ ನೀಡಿಲ್ಲ. ಹತ್ತು ವರ್ಷ ಶಿಕ್ಷಕರಿಲ್ಲದೆ ಶಾಲೆ ನಡೆಸುವುದು ಹೇಗೆ? ಕೆಲವು ಹುದ್ದೆಗಳಿಗೆ ಅನುಮತಿ ನೀಡಿ, ಉಳಿದ ಹುದ್ದೆಗಳ ಭರ್ತಿಗೆ ಅನುಮತಿ ನಿರಾಕರಿಸಿರುವುದರ ಹಿಂದಿನ ಮರ್ಮವೇನು? ಇದರ ಹಿಂದೆ ಹಣದ ವಹಿವಾಟು ನಡೆದಿದೆ’ ಎಂದು ಗಂಭೀರ ಆರೋಪ ಮಾಡಿದರು.

ಸಚಿವರ ಉತ್ತರಕ್ಕೂ ಮೊದಲು ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವುದಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘2,081 ಹುದ್ದೆಯಲ್ಲಿ 257 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಉಳಿದ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.