ADVERTISEMENT

ಕ್ರೀಡಾ ತರಬೇತುದಾರರ ವರ್ಗ: ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:33 IST
Last Updated 30 ಜೂನ್ 2025, 16:33 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಗುತ್ತಿಗೆ ಒಪ್ಪಂದದಡಿ ತಿಂಗಳ ಸಂಚಿತ ವೇತನದ ಆಧಾರದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಲಿಬಾಲ್ ಹಾಗೂ ಬ್ಯಾಸ್ಕೆಟ್‌ಬಾಲ್ ತರಬೇತುದಾರರ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ‘ಕರ್ನಾಟಕ ಕ್ರೀಡಾ ಪ್ರಾಧಿಕಾರ ತರಬೇತುದಾರರ ಕ್ಷೇಮಾಭಿವೃದ್ಧಿ ಸಂಘ’ ಹಾಗೂ ರಾಜ್ಯದ ವಿವಿಧೆಡೆಯ ತರಬೇತುದಾರರು ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ‘ಅರ್ಜಿದಾರರು 28 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ 2017ರಲ್ಲಿ ಅರ್ಜಿದಾರರೂ ಸೇರಿದಂತೆ 54 ಮಂದಿ ತರಬೇತುದಾರರನ್ನು ಸಾರ್ವತ್ರಿಕ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಹೈಕೋರ್ಟ್ ತಡೆ ನೀಡಿದೆ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಹೈಕೋರ್ಟ್‌ ತಡೆ ನೀಡಿದ್ದರೂ ಪುನಃ ವರ್ಗಾವಣೆ ಮಾಡಿದ್ದು ಯಾವ ಆಧಾರದಲ್ಲಿ’ ಎಂದು ಸರ್ಕಾರಿ ವಕೀಲರನ್ನು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತಲ್ಲದೇ ಕ್ರೀಡಾ ಇಲಾಖೆ ಕ್ರೀಡಾ ಪ್ರಾಧಿಕಾರದ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.