ADVERTISEMENT

ಸಂಪುಟ ವಿಸ್ತರಣೆ: ಅಮಿತ್‌ ಶಾ ಭೇಟಿ ಮಾಡಲಿರುವ ಬಿಎಸ್‌ವೈ, ಮುಹೂರ್ತ ನಿಗದಿ ಇಂದು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:30 IST
Last Updated 16 ಆಗಸ್ಟ್ 2019, 20:30 IST
ಅಮಿತ್‌ ಶಾ ಮತ್ತು ಬಿ.ಎಸ್‌.ಯಡಿಯೂರಪ್ಪ – ಸಂಗ್ರಹ ಚಿತ್ರ
ಅಮಿತ್‌ ಶಾ ಮತ್ತು ಬಿ.ಎಸ್‌.ಯಡಿಯೂರಪ್ಪ – ಸಂಗ್ರಹ ಚಿತ್ರ   

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನುಶನಿವಾರ ಮಧ್ಯಾಹ್ನ ಭೇಟಿ ಮಾಡಲಿದ್ದಾರೆ.

ಮೊದಲ ಹಂತದಲ್ಲಿ 18ರಿಂದ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್‌–ಜೆಡಿಎಸ್‌ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿ ಅನರ್ಹಗೊಂಡವರಿಗೆ ಸಚಿವ ಸ್ಥಾನದ ಭರವಸೆ ನೀಡಿರುವುದರಿಂದ ಕನಿಷ್ಠ 12 ಸ್ಥಾನಗಳನ್ನು ಖಾಲಿ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನ ನೀಡಬೇಕಿರುವ ಶಾಸಕರ ಪಟ್ಟಿಯನ್ನು 15 ದಿನಗಳ ಹಿಂದೆಯೇ ಪಕ್ಷದ ರಾಜ್ಯ ಮುಖಂಡರು ಅಮಿತ್‌ ಶಾ ಅವರಿಗೆ ಸಲ್ಲಿಸಿದ್ದಾರೆ. ಶನಿವಾರ ಸಂಜೆಯ ವೇಳೆಗೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿರ್ಧಾರ ಅಂತಿಮಗೊಳ್ಳಲಿದೆ. ನೂತನ ಸಚಿವರ ಪ್ರಮಾಣ ವಚನ ಸಮಾರಂಭಸೋಮವಾರ ನಡೆಯಲಿದೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಶುಕ್ರವಾರ ಸಂಜೆ ಕರ್ನಾಟಕ ಭವನದಲ್ಲಿ ಭೇಟಿ ಮಾಡಿದ ಯಡಿಯೂರಪ್ಪ, ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಅರ್ಧ ಗಂಟೆ ಕಾಲ ಚರ್ಚಿಸಿದರು.

ADVERTISEMENT

ಸಚಿವ ಸ್ಥಾನ ನೀಡುವ ಕುರಿತು ಈ ಇಬ್ಬರೂ ಮುಖಂಡರಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿದ್ದು, ವರಿಷ್ಠರ ಒಪ್ಪಿಗೆ ಪಡೆಯುವುದು ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.