ಪ್ರಾತಿನಿಧಿಕ ಚಿತ್ರ
ಮಂಗಳೂರು/ಕಾರವಾರ: ರಾಜ್ಯದ ಕೆಲವು ಭಾಗಗಳಲ್ಲಿ ಭಾನುವಾರ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗಿದ್ದು ಅಲ್ಲಲ್ಲಿ ಗುಡ್ಡಗಳು ಕುಸಿದಿವೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲು ಮತ್ತು ವಾಹನ ಸಂಚಾರ ವ್ಯತ್ಯಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂತರ ಜಿಲ್ಲಾ ಸಂಪರ್ಕ ಕಡಿತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸುಂಕದಮಕ್ಕಿ ನೆಮ್ಮಾರು ಸಮೀಪ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಗುಡ್ಡಕುಸಿತ ಉಂಟಾಗಿದ್ದು, ಶೃಂಗೇರಿಯಿಂದ ಉಡುಪಿ ಮತ್ತು ಮಂಗಳೂರು ಸಂಪರ್ಕಿಸವ ಮಾರ್ಗ ಕಡಿತಗೊಂಡಿದೆ.
ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಕೆರೆಕಟ್ಟೆ, ಎಸ್.ಕೆ. ಬಾರ್ಡರ್ ಮೂಲಕ ಉಡುಪಿ ಮತ್ತು ಮಂಗಳೂರು ಕಡೆ ಸಾಗುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಆಗುಂಬೆ ಮಾರ್ಗದಲ್ಲಿ ಸಂಚರಿಸಲು ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದ್ದಾರೆ. ಸೋಮವಾರ ಬೆಳಿಗ್ಗೆ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಆರು ತಾಲ್ಲೂಕುಗಳ ಶಾಲೆ ಮತ್ತು ಅಂಗನವಾಡಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳ ಶಿಶುಪಾಲನ ಕೇಂದ್ರ, ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಉಡುಪಿ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಪುನಃ ಭೂಕುಸಿತ ಸಂಭವಿಸಿದೆ. ಇದೇ ಘಟ್ಟದಲ್ಲಿ ಶನಿವಾರವೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತವಾಗಿತ್ತು.
ದಕ್ಷಿಣ ಕನ್ನಡ ಮಂಗಳೂರು– ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು ಸಮೀಪದ ತಿರುವೈಲ್ ಗ್ರಾಮದ ತೆತ್ತಿಕಲ್ ಎಂಬಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿತವಾಗಿ ರಸ್ತೆಯ ಒಂದು ಭಾಗಕ್ಕೆ ಬೃಹತ್ ಕಲ್ಲುಗಳು ಮತ್ತು ಮಣ್ಣು ಬಿದ್ದ ಕಾರಣ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು. ಇಲ್ಲಿ ಕಳೆದ ಮಳೆಗಾಲದಲ್ಲೂ ಕುಸಿತ ಉಂಟಾಗಿ ಆತಂಕ ಮೂಡಿತ್ತು.
ಮಂಗಳೂರು ನಗರ ಸಮೀಪದ ಪಡೀಲ್ ಮತ್ತು ಜೋಕಟ್ಟೆ ನಡುವೆ ರೈಲು ಹಳಿಯ ಮೇಲೆ ಗುಡ್ಡದ ಮಣ್ಣು ಬಿದ್ದ ಕಾರಣ ಶನಿವಾರ ರಾತ್ರಿಯಿಂದ ರೈಲು ಸಂಚಾರ ವ್ಯತ್ಯಯವಾಯಿತು. ಈ ಭಾಗದಲ್ಲಿ ಸಾಗುವ ಮತ್ತು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲುಗಳು ಮಣ್ಣು ತೆರವು ಕಾರ್ಯ ಮುಗಿಯುವವರೆಗೆ ತಡವಾಗಿ ಸಾಗಲಿವೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಉಡುಪಿ ನಗರದ ಹಲವೆಡೆ ರಸ್ತೆಗಳಲ್ಲಿ ನೀರು ಸಂಗ್ರಹವಾದ ಕಾರಣ ವಾಹನ ಸಂಚಾರಕ್ಕೆ ತೊಡಕಾಯಿತು. ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಕಾಪು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಮಂಗಳೂರು ನಗರದ ಕಂಕನಾಡಿಯ ಸುವರ್ಣ ಲೇನ್‌ನಲ್ಲಿ ಆವರಣ ಗೋಡೆಯೊಂದು ಎದುರು ಭಾಗದ ಮನೆಯ ಕಂಪೌಂಡ್‌ಗೆ ಬಡಿದು ಗೇಟ್ ತುಂಡಾಗಿ ಮನೆಯ ಅಂಗಳದಲ್ಲಿ ಬಿದ್ದ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ. ಗೋಡೆ ಗೇಟ್‌ಗೆ ಬಡಿಯುವಾಗ ಸಮೀಪದ ಟ್ರಾನ್ಸ್‌ಫಾರ್ಮರ್‌ನಿಂದ ಕಿಡಿ ಹಾರಿದೆ. ಇದು ನಡೆದಾಗ ಯಾರೂ ಹೊರಗೆ ಇರಲಿಲ್ಲ.
ನಗರದ ಶಿವಬಾಗ್‌ನಲ್ಲೂ ಆವರಣ ಗೋಡೆ ಕುಸಿದಿದ್ದು ಸಮೀಪದ ಒಂಟಿ ಮನೆಯಲ್ಲಿ ವಾಸವಾಗಿದ್ದ ಕುಟುಂಬವನ್ನು ಜೋಡುಕಟ್ಟೆಯ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕಂಕನಾಡಿ ಬಳಿಯ ನಾಗುರಿ ಜನವಸತಿ ಪ್ರದೇಶದಲ್ಲಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿದಿದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿಯ ರಭಸಕ್ಕೆ ಹಲವೆಡೆ ಮರಗಳು ಉರುಳಿ, ಮನೆಗಳಿಗೆ ಹಾನಿಯುಂಟಾಗಿದೆ. ಭಟ್ಕಳದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.
ಹುಬ್ಬಳ್ಳಿ ವರದಿ: ಹುಬ್ಬಳ್ಳಿ–ಧಾರವಾಡದಲ್ಲಿಯೂ ಭಾನುವಾರ ಕೆಲ ಸಮಯ ಮಳೆಯಾಗಿದ್ದು ಹುಬ್ಬಳ್ಳಿ ನಗರದಲ್ಲಿ ಸಾಯಂಕಾಲವಿಡೀ ಜಿಟಿಜಿಟಿ ಮಳೆಯಾಗಿದೆ.
ಮಡಿಕೇರಿ ವರದಿ: ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಬಿರುಸಿನಿಂದ ಮಳೆಯಾಗಿದೆ. ಜೋರಾದ ಗಾಳಿಯೊಂದಿಗೆ ಶನಿವಾರ ತಡರಾತ್ರಿ ಆರಂಭವಾದ ಮಳೆ ಭಾನುವಾರ ದಿನವಿಡೀ ಸುರಿಯಿತು.
ಹಾರಂಗಿ ಜಲಾಶಯದ ಮಟ್ಟ 2851.73 ಅಡಿ ಇದ್ದು, (ಗರಿಷ್ಠ ಮಟ್ಟ 2,859 ಅಡಿ) ಸದ್ಯ, 3,208 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ 3,750 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.