ADVERTISEMENT

ಕೋಲಾರ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಬೆಡ್‌ ಶೀಟ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 12:48 IST
Last Updated 14 ಮಾರ್ಚ್ 2023, 12:48 IST
   

ಕೋಲಾರ: ಮತದಾರರಿಗೆ ವಿತರಿಸಲು ಬೆಂಗಳೂರಿನಿಂದ ಬಂಗಾರಪೇಟೆಗೆ ವಾಹನದಲ್ಲಿ ಸಾಗಿಸುತ್ತಿದ್ದ ₹ 4.99 ಲಕ್ಷ ಮೌಲ್ಯದ 1,980 ಬೆಡ್‌ ಶೀಟ್‌ಗಳನ್ನು ತಾಲ್ಲೂಕಿನ ರಾಮಸಂದ್ರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಗಾರಪೇಟೆಯ ರಾಜಕೀಯ ಮುಖಂಡ ಶೇಷು ಎಂಬುವರಿಗೆ ತಲುಸಲು ಬೆಡ್‌ಶೀಟ್‌ಗಳನ್ನು ಸಾಗಿಸುತ್ತಿರುವುದಾಗಿ ಚಾಲಕ ಪೊಲೀಸರಿಗೆ ಹೇಳಿದ್ದಾನೆ.

ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನವನ್ನು ಸೋಮವಾರ ಸಂಜೆ ತಡೆದು ವೇಮಗಲ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಸುಧಾಕರ್‌ ಹಾಗೂ ಕಾನ್‌ಸ್ಟೆಬಲ್ ಸಿದ್ದಪ್ಪ ಪರಿಶೀಲನೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ.

ADVERTISEMENT

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ ತೆರೆದಿದ್ದಾರೆ.

‘ಚುನಾವಣಾ ಸಂಬಂಧ ಮತದಾರರಿಗೆ ಅಮಿಷವೊಡ್ಡಲು ಈ ಬೆಡ್‌ಶೀಟ್‌ ಸಾಗಿಸುತ್ತಿರುವ ಮಾಹಿತಿ ನಮಗೆ ಬಂದಿದೆ. ಬೆಡ್‌ಶೀಟ್‌ ವಶಪಡಿಸಿಕೊಂಡು ವೇಮಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.