ADVERTISEMENT

ಕೆಪಿಎಸ್‌ಸಿ: ಸುಗ್ರೀವಾಜ್ಞೆ ತಿರಸ್ಕರಿಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 18:53 IST
Last Updated 8 ಜೂನ್ 2019, 18:53 IST

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 1998ರ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಅಕ್ರಮವಾಗಿ ನೇಮಕಗೊಂಡ ಕೆಲವು ಅಧಿಕಾರಿಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ತರಲಿರುವ ಸುಗ್ರೀವಾಜ್ಞೆಯನ್ನು ತಿರಸ್ಕರಿಸಬೇಕು ಎಂದು ‘ಕರ್ನಾಟಕ ರಾಷ್ಟ್ರ ಸಮಿತಿ’ಯು ರಾಜ್ಯಪಾಲರಿಗೆ ಮನವಿ ಮಾಡಿದೆ.

‘ಈ ನೇಮಕಾತಿಯಲ್ಲಿ ಕೆಪಿಎಸ್‌ಸಿಯಿಂದ ಹಲವು ಅಕ್ರಮಗಳು ನಡೆದಿವೆ. ಸಿಐಡಿ ತನಿಖೆಯಲ್ಲಿ ಅಕ್ರಮ ಸಾಬೀತಾದ ಕಾರಣ ಅಕ್ರಮ ಫಲಾನುಭವಿಗಳನ್ನು ಸೇವೆಯಿಂದ ತೆರವುಗೊಳಿಸಬೇಕು, ಇಲ್ಲವೇ ಅವರಿಗೆ ಹಿಂಬಡ್ತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ ಸಹ ತೀರ್ಪನ್ನು ಪುರಸ್ಕರಿಸಿದೆ. ಹೀಗಿರುವಾಗ ಸುಗ್ರೀವಾಜ್ಜೆ ಮೂಲಕ ಅಕ್ರಮ ಎಸಗಿದವರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ದೀಪಕ್‌ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ. ಅದರ ಪ್ರತಿಯನ್ನು ರಾಷ್ಟ್ರಪತಿಗೂ ಕಳುಹಿಸಿಕೊಟ್ಟಿದ್ದಾರೆ.

‘ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ 3 ವರ್ಷದೊಳಗೆ ಮಾತ್ರ ಉತ್ತರ ಪತ್ರಿಕೆ ಅಥವಾ ಪರೀಕ್ಷೆ ನಡೆದ ಕ್ರಮವನ್ನು ಪರಿಶೀಲಿಸಬಹುದಷ್ಟೇ ಎಂಬ ಅಂಶವನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸಿರುವುದು ಸಹ ಕಾನೂನಿಗೆ ವಿರುದ್ಧವಾದುದು. ಮುಂದೆಯೂ ಸಹ ಸರ್ಕಾರ, ಕೆಪಿಎಸ್‌ಸಿ ಮೂಲಕ ಅಕ್ರಮ ನಡೆಸಲು ಮುಂದಾಗಿರುವುದನ್ನು ತೋರಿಸುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.