ADVERTISEMENT

ಕೆಪಿಎಸ್‌ಸಿ: 10 ವರ್ಷ,10 ಪರೀಕ್ಷಾ ನಿಯಂತ್ರಕರು!

ನಾಲ್ಕು ವರ್ಷಗಳಲ್ಲಿ ಏಳು ಐಎಎಸ್‌ ಅಧಿಕಾರಿಗಳ ವರ್ಗ

ರಾಜೇಶ್ ರೈ ಚಟ್ಲ
Published 28 ಡಿಸೆಂಬರ್ 2023, 22:48 IST
Last Updated 28 ಡಿಸೆಂಬರ್ 2023, 22:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ನಿಯಂತ್ರಕ ಹುದ್ದೆಗೆ 10 ವರ್ಷಗಳಲ್ಲಿ 10 ಮಂದಿ (ಒಬ್ಬರನ್ನು ಎರಡು ಬಾರಿ) ಐಎಎಸ್‌ ಅಧಿಕಾರಿಗಳನ್ನು ನೇಮಿಸುವ ಮೂಲಕ ರಾಜ್ಯ ಸರ್ಕಾರ ದಾಖಲೆ ಬರೆದಿದೆ. ಅದರಲ್ಲೂ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಏಳು ಐಎಎಸ್‌ ಅಧಿಕಾರಿಗಳು ಈ ಹುದ್ದೆಗೆ ನಿಯೋಜನೆಗೊಂಡಿದ್ದಾರೆ!

ಕೆಎಎಸ್‌ ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಯೂ ಸೇರಿದಂತೆ ಎಲ್ಲ ಹುದ್ದೆಗಳ ನೇಮಕಾತಿಗಳಿಗೆ ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ವ್ಯಕ್ತಿತ್ವ ಪರೀಕ್ಷೆಗಳ (ಸಂದರ್ಶನ) ಗೌಪ್ಯ ವಿಷಯಗಳ ಹೊಣೆಯನ್ನು ಪರೀಕ್ಷಾ ನಿಯಂತ್ರಕರು ನಿಭಾಯಿಸುತ್ತಾರೆ. ಪದೇ ಪದೇ ಪರೀಕ್ಷಾ ನಿಯಂತ್ರಕರ ವರ್ಗಾವಣೆ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ. 

ADVERTISEMENT

2023ರ ಜೂನ್‌ 21ರಿಂದ ಪರೀಕ್ಷಾ ನಿಯಂತ್ರಕ ಹುದ್ದೆಯಲ್ಲಿದ್ದ ಡಾ. ಗಿರೀಶ ದಿಲೀಪ ಬಡೋಲೆ ಅವರನ್ನು ಮಂಗಳವಾರ (ಡಿ. 26) ಬೀದರ್‌ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ವರ್ಗಾವಣೆ ಮಾಡಲಾಗಿದೆ. ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್‌. ಲತಾ ಕುಮಾರಿ ಅವರಿಗೇ ಪರೀಕ್ಷಾ ನಿಯಂತ್ರಕ ಹುದ್ದೆಯನ್ನೂ ಹೆಚ್ಚುವರಿಯಾಗಿ ನೀಡಲಾಗಿದೆ.

ಕೆಪಿಎಸ್‌ಸಿ ಸುಧಾರಣೆಗೆ ರಚಿಸಲಾಗಿದ್ದ ಪಿ.ಸಿ. ಹೋಟಾ ಸಮಿತಿಯ ಶಿಫಾರಸಿನಂತೆ ಪರೀಕ್ಷಾ ನಿಯಂತ್ರಕ ಹುದ್ದೆಗೆ ಕಳೆದ 10 ವರ್ಷಗಳಿಂದ ಐಎಎಸ್ ಅಧಿಕಾರಿಯನ್ನು ರಾಜ್ಯ ಸರ್ಕಾರ ನೇಮಿಸುತ್ತಲೇ ಬಂದಿದೆ. ಆದರೆ, ಕನಿಷ್ಠ ಮೂರು ವರ್ಷ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಬಾರದೆಂಬ ಸಮಿತಿಯ ಶಿಫಾರಸಿಗೆ ಮನ್ನಣೆ ನೀಡಿಲ್ಲ. ನೇಮಕಗೊಂಡ ಐಎಎಸ್‌ ಅಧಿಕಾರಿಗಳ ಪೈಕಿ ಮೂವರು ಮಾತ್ರ (ಆರ್‌. ವೆಂಕಟೇಶ್‌ಕುಮಾರ್‌, ಕೃಷ್ಣಾ ಬಾಜಪೇಯಿ, ಜಿ.ಆರ್‌. ದಿವ್ಯಾ ಪ್ರಭು) ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಈ ಹುದ್ದೆಯಲ್ಲಿದ್ದರು. ಉಳಿದ ಎಲ್ಲ ಅಧಿಕಾರಿಗಳು ಕೆಲವು ತಿಂಗಳು ಮಾತ್ರ ಈ ಹುದ್ದೆ ನಿಭಾಯಿಸಿದ್ದಾರೆ. 

ಕೃಷ್ಣಾ ಬಾಜಪೇಯಿ ಅವರನ್ನು 2019 ಫೆ. 22ರಂದು ಪರೀಕ್ಷಾ ನಿಯಂತ್ರಕ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ, ಎರಡನೇ ಬಾರಿಗೆ ಆ ಹುದ್ದೆಗೆ ಬಂದ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ (ಅದಕ್ಕೂ ಮೊದಲು 2015ರ ಜೂನ್ 22ರಿಂದ 2016ರ ಜೂನ್‌ 21ರವರೆಗೆ ಈ ಹುದ್ದೆ ನಿಭಾಯಿಸಿದ್ದರು) ಮತ್ತು ಜಿ.ಆರ್‌. ದಿವ್ಯಾ ಪ್ರಭು ಕೆಲವು ತಿಂಗಳಷ್ಟೇ ಕಾರ್ಯನಿರ್ವಹಿಸಿದ್ದರು. ದಿವ್ಯಾ ಪ್ರಭು ಅವರನ್ನು ವರ್ಗಾವಣೆ ಮಾಡಿದ ನಂತರ, ಆಗ ರೇಷ್ಮೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ. ಕನಗವಲ್ಲಿ ಅವರಿಗೆ ಈ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಎರಡೂ ಹುದ್ದೆಯನ್ನು ಅವರು 10 ತಿಂಗಳು ನಿಭಾಯಿಸಿದ್ದರು. ಆಗ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ, ‘ಕಾಯಂ ಪರೀಕ್ಷಾ ನಿಯಂತ್ರಕರಿಲ್ಲದೆ 4 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ತಕ್ಷಣ ಪರೀಕ್ಷಾ ನಿಯಂತ್ರಕರನ್ನು ನೇಮಿಸಬೇಕು’ ಎಂದು ಮನವಿ ಮಾಡಿದ್ದರು.

ಹೀಗಾಗಿ, ಕನಗವಲ್ಲಿ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ, ನಳಿನಿ ಅತುಲ್‌ ಅವರಿಗೆ ಹುದ್ದೆಯನ್ನು ನೀಡಿತ್ತು. ಆದರೆ, ಕೇವಲ ಒಂಬತ್ತು ತಿಂಗಳು ಮಾತ್ರ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಲಾಗಿತ್ತು. ಆ ನಂತರ, ಭನ್ವರ್‌ಸಿಂಗ್‌ ಮೀನಾ ( 3 ತಿಂಗಳು), ಫೌಝಿಯಾ ತರನ್ನುಮ್ (4 ತಿಂಗಳು), ಡಾ. ಗಿರೀಶ ದಿಲೀಪ ಬಡೋಲೆ (6 ತಿಂಗಳು) ಈ ಹುದ್ದೆಗೆ ಬಂದು ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.