ADVERTISEMENT

ಕೃಷ್ಣಾ ನದಿ ನೀರು ಹಂಚಿಕೆ: ತೆಲಂಗಾಣದ ಬೇಡಿಕೆ ತಿರಸ್ಕರಿಸಲು ಆಗ್ರಹ

ಕೇಂದ್ರ ಸಚಿವರ ಜತೆ ರಮೇಶ್ ಜಾರಕಿಹೊಳಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 19:10 IST
Last Updated 10 ಅಕ್ಟೋಬರ್ 2020, 19:10 IST
ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ   

ಬೆಂಗಳೂರು: ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ಹೊಸ ನ್ಯಾಯಮಂಡಳಿ ನೇಮಕ ಮಾಡಬೇಕೆಂಬ ತೆಲಂಗಾಣ ರಾಜ್ಯ ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಬೇಕು ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಮರು ವಿಚಾರಣೆ ನಡೆಸುವಂತೆ ತೆಲಂಗಾಣ ಸರ್ಕಾರ ಆಗ್ರಹಿಸಿದೆ. ಈ ಕಾರಣಕ್ಕಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರೊಂದಿಗೆ ದೂರವಾಣಿ ಮೂಲಕ ಶನಿವಾರ ಚರ್ಚೆ ನಡೆಸಲಾಗಿದೆ. 2013ರಲ್ಲೇ ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ತೀರ್ಮಾನವಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಲಾಗಿದೆ. ನ್ಯಾಯಮಂಡಳಿ ಐತೀರ್ಪಿನ ಜಾರಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿರುವಾಗ ತೆಲಂಗಾಣ ಸರ್ಕಾರ ತಗಾದೆ ತೆಗೆದಿದೆ. ಅದನ್ನು ಮಾನ್ಯ ಮಾಡದಂತೆ ಒತ್ತಾಯ ಮಾಡಲಾಗಿದೆ’ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹದಾಯಿ ನದಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಗೋವಾ ಸರ್ಕಾರವು ಕರ್ನಾಟಕದ ವಿರುದ್ಧ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂಬುದನ್ನೂ ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಮಹದಾಯಿ ನೀರನ್ನು ಮಲಪ್ರಭಾ ನದಿಗೆ ಹರಿಸಲಾಗಿದೆ ಎಂಬ ಸುಳ್ಳು ಆರೋಪದ ಕುರಿತು ಸಚಿವರಿಗೆ ಸ್ಪಷ್ಟವಾದ ಮಾಹಿತಿ ನೀಡಲಾಗಿದೆ. ಈ ವಿಚಾರದಲ್ಲೂ ಗೋವಾ ಸರ್ಕಾರದ ವಾದವನ್ನು ಮಾನ್ಯ ಮಾಡದಂತೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.