ADVERTISEMENT

ಬೀದರ್‌ ಪಶುವೈದ್ಯ ವಿ.ವಿ: ಬ್ಯಾಕ್‌ಲಾಗ್‌ ಹುದ್ದೆ ಭರ್ತಿಯಲ್ಲಿ ಅಕ್ರಮ ಆರೋಪ

ಬೀದರ್‌ ಪಶುವೈದ್ಯ ವಿ.ವಿ ವಿರುದ್ಧ ನೊಂದ ಆಕಾಂಕ್ಷಿಗಳಿಂದ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 0:00 IST
Last Updated 13 ಮಾರ್ಚ್ 2023, 0:00 IST
ಕೆ.ಸಿ. ವೀರಣ್ಣ
ಕೆ.ಸಿ. ವೀರಣ್ಣ   

ಬೆಂಗಳೂರು: ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಬೋಧಕ ವರ್ಗದ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಯಲ್ಲಿ ನಿಯಮ ಉಲ್ಲಂಘಿಸಿ ಆಯ್ಕೆಯ ಮಾನದಂಡ ಬದಲಾವಣೆ ಮಾಡಿರುವುದರಿಂದ ಅನ್ಯಾಯವಾಗುತ್ತಿದೆ ಎಂದು ನೊಂದ ಕೆಲವು ಆಕಾಂಕ್ಷಿಗಳು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ್ದಾರೆ.

‘ಸಹಾಯಕ ಪ್ರಾಧ್ಯಾಪಕರ ಒಂಬತ್ತು, ಸಹ ಪ್ರಾಧ್ಯಾಪಕರ 14 ಮತ್ತು ಪ್ರಾಧ್ಯಾಪಕರ ಏಳು ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಯಲ್ಲಿ ಅಭ್ಯರ್ಥಿಯ ವಯಸ್ಸು ಮತ್ತು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದಲ್ಲಿ ಮೆರಿಟ್‌ ಪಟ್ಟಿ ಸಿದ್ಧಪಡಿಸಿ, ಆಯ್ಕೆ ಮಾಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನಿಯಮ ಹೇಳುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆಯೂ ಅದನ್ನೇ ಹೇಳುತ್ತದೆ. ಆದರೆ, ಬೀದರ್‌ ಪಶುವೈದ್ಯಕೀಯ ವಿಶ್ವವಿದ್ಯಾಲಯವು ನಿಯಮಗಳಿಗೆ ವಿರುದ್ಧವಾಗಿ ‘ಸ್ಕೋರ್‌ ಕಾರ್ಡ್‌’ ಮಾನದಂಡದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೋಧಕ ವರ್ಗದ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ವಿಶ್ವವಿದ್ಯಾಲಯವು 2021 ರ ಅಕ್ಟೋಬರ್‌ 30 ರಂದು ಅಧಿಸೂಚನೆ ಹೊರಡಿಸಿತ್ತು. ವಯಸ್ಸು ಮತ್ತು ಅಂಕಗಳನ್ನು ಆಧರಿಸಿದ ಮೆರಿಟ್‌ ಬದಲಿಗೆ ‘ಸ್ಕೋರ್‌ ಕಾರ್ಡ್‌’ ಮಾನದಂಡವನ್ನು ಬಳಸುತ್ತಿರುವುದನ್ನು ವಿರೋಧಿಸಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರಿಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ನಮ್ಮ ಆಕ್ಷೇಪಣೆಯನ್ನು ನಿರ್ಲಕ್ಷಿಸಿ ನಿಯಮಗಳಿಗೆ ವಿರುದ್ಧವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ADVERTISEMENT

ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆ, ಕಾನೂನು ಇಲಾಖೆ, ಹಣಕಾಸು ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗಳ ಕಾರ್ಯದರ್ಶಿಗಳಿಗೂ ಅಭ್ಯರ್ಥಿಗಳು ದೂರು ನೀಡಿದ್ದಾರೆ.

‘ಕ್ಷೇತ್ರ ಕಾರ್ಯ, ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದು ಮತ್ತಿತರ ವಿಷಯಗಳು ‘ಸ್ಕೋರ್‌ ಕಾರ್ಡ್‌’ನ ಭಾಗವಾಗಿವೆ. ಕೆಲವು ವಿಷಯದ ಉಪನ್ಯಾಸಕರಿಗೆ ಅಂತಹ ಅವಕಾಶ ಇರುವುದಿಲ್ಲ. ಅವರೆಲ್ಲರನ್ನೂ ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡುವ ಉದ್ದೇಶದಿಂದ ಈ ಮಾನದಂಡ ಬಳಸಲಾಗುತ್ತಿದೆ. ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ವಯಸ್ಸು ಮತ್ತು ಅಂಕಗಳನ್ನು ಆಧರಿಸಿದ ಮೆರಿಟ್‌ ಮಾನದಂಡವನ್ನೇ ಎಲ್ಲ ವಿಶ್ವವಿದ್ಯಾಲಯಗಳೂ ಪಾಲಿಸುತ್ತಿವೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಯಲ್ಲೂ ಇದೇ ಮಾನದಂಡ ಅನುಸರಿಸಲಾಗುತ್ತಿದೆ. ಬೀದರ್‌ ಪಶುವೈದ್ಯಕೀಯ ವಿಶ್ವವಿದ್ಯಾಲಯ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ನಡೆಸುತ್ತಿರುವುದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೊಂದ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ತೀರ್ಮಾನಕ್ಕೆ ಬದ್ಧ’
‘ರಾಜ್ಯ ಸರ್ಕಾರದ ಆದೇಶದ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆದಿದೆ. ನಿಯಮದಂತೆಯೇ ಎಲ್ಲವೂ ನಡೆದಿದೆ. ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸರ್ಕಾರ ಅನುಮೋದಿಸಿದರೆ ನೇಮಕಾತಿ ಆದೇಶ ನೀಡಲಾಗುವುದು. ಸರ್ಕಾರ ಒಪ್ಪದಿದ್ದರೆ ನೇಮಕಾತಿ ಆದೇಶ ನೀಡುವುದಿಲ್ಲ’ ಎಂದು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ. ವೀರಣ್ಣ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.