ADVERTISEMENT

ಹಾಸನ ಜಿಲ್ಲಾಧಿಕಾರಿಗೆ ಲೋಕಾಯುಕ್ತ ನೋಟಿಸ್‌

ಮಾಜಿ ಸೈನಿಕರ, ಸೈನಿಕರ ಕೋಟಾದಲ್ಲಿ ಜಮೀನು ಮಂಜೂರು ಮಾಡಲು ವಿಳಂಬ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:43 IST
Last Updated 11 ಜೂನ್ 2025, 15:43 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

ಬೆಂಗಳೂರು: ಮಾಜಿ ಸೈನಿಕರು ಮತ್ತು ಸೈನಿಕರ ಕೋಟಾದಡಿ ಜಮೀನು ಮಂಜೂರು ಮಾಡದ ಹಾಸನ ಜಿಲ್ಲಾಧಿಕಾರಿ ಮತ್ತು ಬೇಲೂರು ತಹಶೀಲ್ದಾರ್‌ ಅವರಿಗೆ ಲೋಕಾಯುಕ್ತವು ನೋಟಿಸ್‌ ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.

‘ಹಾಸನದ ಕೆ.ಸಿ.ಬಸವರಾಜು, ಕೆ.ಚಂದ್ರಶೇಖರ್, ಹಿ.ಸಿದ್ದಪ್ಪ ಮತ್ತು ಮಂಜುನಾಥ ಅವರು ನಿವೃತ್ತ ಸೈನಿಕರು ಮತ್ತು ಸೈನಿಕರ ಕೋಟಾದಡಿ ಜಮೀನು ಮಂಜೂರು ಮಾಡುವಂತೆ 2017ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬೇಲೂರು ತಾಲ್ಲೂಕು ವ್ಯಾಪ್ತಿಯ ಮೋಜಣಿದಾರರು, ಮೋಜಣಿ ಮಾಡಿ ತಲಾ 4 ಎಕರೆ 38 ಗುಂಟೆ ಮಂಜೂರು ಮಾಡುವಂತೆ ಸಕಲೇಶಪುರ ಉಪವಿಭಾಗಾಧಿಕಾರಿಗಳಿಗೆ ಕಡತ ಸಲ್ಲಿಸಿದ್ದರು’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ADVERTISEMENT

‘ಆದರೆ ಹಾಸನ ಉಪವಿಭಾಗಾಧಿಕಾರಿ, ಬೇಲೂರು ತಹಶೀಲ್ದಾರ್ ಮತ್ತು ಹಾಸನ ಜಿಲ್ಲಾಧಿಕಾರಿ ಈ ಸಂಬಂಧ ಯಾವುದೇ ಕ್ರಮ ತೆಗೆದುಕೊಳ್ಳದೆ ವಿಳಂಬ ಧೋರಣೆ ಅನುಸರಿಸಿದ್ದಾರೆ. ಈ ಸಂಬಂಧ ನಾಲ್ವರು ಅರ್ಜಿದಾರರು 2022ರ ಏಪ್ರಿಲ್‌ನಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು’ ಎಂದು ಮಾಹಿತಿ ನೀಡಿದೆ.

‘ಈ ಸಂಬಂಧ ಜಿಲ್ಲಾಧಿಕಾರಿ, ಸಂಬಂಧಿತ ಉ‍ಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ನೋಟಿಸ್‌ ನೀಡಿ, ವಿವರಣೆ ಕೇಳಲಾಗಿತ್ತು. ಅವರು ಅರ್ಜಿದಾರರಿಗೆ ಮಂಜೂರು ಮಾಡಬಹುದು ಎಂದು ಗುರುತಿಸಲಾಗಿದ್ದ ಜಾಗವು ಒತ್ತುವರಿಯಾಗಿದೆ ಎಂದಷ್ಟೇ ಉತ್ತರ ನೀಡಿದ್ದರು. ಬೇರೆಡೆ ಏಕೆ ಜಮೀನು ನೀಡಲಾಗಿಲ್ಲ ಎಂಬುದನ್ನು ವಿವರಿಸಿರಲಿಲ್ಲ’ ಎಂದು ತಿಳಿಸಿದೆ.

‘ಅಗತ್ಯ ವಿವರಣೆ ನೀಡದೇ ಇರುವುದರ ಸಂಬಂಧ ಖುದ್ದು ಹಾಜರಾಗಿ ಮಾಹಿತಿ ನೀಡಿ ಬೇಲೂರು ತಹಶೀಲ್ದಾರ್‌ ಅವರಿಗೆ ಎಂದು 2024ರ ನವೆಂಬರ್‌ನಲ್ಲಿ ಮೂರು ಬಾರಿ ನೋಟಿಸ್‌ ನೀಡಿದ್ದರೂ, ಹಾಜರಾಗಲಿಲ್ಲ. ಬದಲಿಗೆ ಬೇಲೂರು ಗ್ರೇಡ್‌–2 ತಹಶೀಲ್ದಾರ್‌ ಅವರನ್ನು ಕಳುಹಿಸಿದ್ದರು. ಅವರಿಗೆ ಪ್ರಕರಣದ ಬಗ್ಗೆ ಮಾಹಿತಿಯೇ ಇರಲಿಲ್ಲ’ ಎಂದು ವಿವರಿಸಿದೆ.

‘ಕಂದಾಯ ಇಲಾಖೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಯಾವುದೇ ಕೆಲಸಗಳ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರು ಅಗತ್ಯ ಮಾಹಿತಿಯನ್ನೂ ಒದಗಿಸಿಲ್ಲ. ಹಲವು ಬಾರಿ ನೋಟಿಸ್‌ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಮೀನು ಮಂಜೂರು ಮಾಡುವ ಸಂಬಂಧ 15 ದಿನಗಳಲ್ಲಿ ಕ್ರಮ ತೆಗೆದುಕೊಳ್ಳಿ’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

‘ಜಮೀನು ಮಂಜೂರು ಮಾಡುವಲ್ಲಿ ವಿಳಂಬ ಮಾಡಿದ್ದಕ್ಕೆ ವಿವರಣೆ ನೀಡಿ. ಇದೇ 9ರಂದು ಖುದ್ದು ಹಾಜರಾಗಿ’ ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.