ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಾಸನ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್.ಜಯಣ್ಣ ಮತ್ತು ಕುಟುಂಬದವರ ಹೆಸರಿನಲ್ಲಿ ಒಟ್ಟು 17 ನಿವೇಶನ ಮತ್ತು 8 ವಾಸದ ಮನೆಗಳು ಇರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಲ್ಲಿ ವಿವಿಧ ಇಲಾಖೆಗಳ ಐವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ಒಟ್ಟು ₹24.46 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.
ಬಿಬಿಎಂಪಿಯ ತೆರಿಗೆ ಮೌಲ್ಯಮಾಪಕ ಎನ್.ವೆಂಕಟೇಶ್ ಅವರ ಬಂಗಲೆ
ರಾಜ್ಯದ ವಿವಿಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ ಕಾರ್ಯಾಚರಣೆ ರೂಪಿಸಲಾಗಿತ್ತು. ಐವರು ಅಧಿಕಾರಿಗಳಿಗೆ ಸೇರಿದ ಒಟ್ಟು 25 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ದಾಳಿ ನಡೆಸಲಾಯಿತು ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.
ಆರ್.ಜಯಣ್ಣ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಒಟ್ಟು ₹6.28 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ತೋಟಗಾರಿಕೆ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ಕೆ.ಓಂಪ್ರಕಾಶ್ ಮತ್ತು ಕುಟುಂಬದವರಿಗೆ ಸೇರಿದ ₹6.26 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಐವರು ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ದಾಳಿಯ ವೇಳೆ ಒಟ್ಟು ₹20.33 ಕೋಟಿ ಮೌಲ್ಯದ ಸ್ಥಿರಾಸ್ತಿ, ₹97 ಲಕ್ಷ ನಗದು, ₹1.58 ಕೋಟಿ ಮೌಲ್ಯದ ಚಿನ್ನಾಭರಣ, ₹1 ಕೋಟಿ ಮೌಲ್ಯದ ವಾಹನಗಳು, ₹1.42 ಕೋಟಿ ಮೌಲ್ಯದ ಗೃಹಬಳಕೆ ವಸ್ತುಗಳು, ಹೂಡಿಕೆ ಪತ್ರಗಳು ಮತ್ತು ಬ್ಯಾಂಕ್ ಠೇವಣಿ ಪತ್ತೆಯಾಗಿವೆ ಎಂದು ಲೋಕಾಯುಕ್ತವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.