ADVERTISEMENT

ಚುನಾವಣಾ ಆಯೋಗಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ ದೂರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 17:51 IST
Last Updated 17 ಏಪ್ರಿಲ್ 2019, 17:51 IST

ಬೆಂಗಳೂರು: ‘ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಜೊತೆಗೆ ಮತದಾರರ ಮೇಲೆ ಪರಿಣಾಮ ಬೀರುವಂತಿದೆ. ಆ ಪತ್ರಿಕೆಯನ್ನು ಚುನಾವಣಾ ಪ್ರಕ್ರಿಯೆ (ಮೇ 23) ಮುಗಿಯುವರೆಗೆ ನಿಷೇಧಿಸಬೇಕು’ ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಮುಖ್ಯ ಚುನಾವಣಾ ಆಯೋಗಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ ಬುಧವಾರ ದೂರು ನೀಡಿದ್ದಾರೆ.

ಪತ್ರಿಕೆಯಲ್ಲಿ ಬಂದಿರುವ ಸುದ್ದಿಯ ತುಣುಕುಗಳನ್ನೂ ದೂರಿನ ಜೊತೆ ಲಗತ್ತಿಸಿರುವ ಅವರು, ‘ರಾಜಕೀಯ ದುರುದ್ದೇಶದಿಂದ ಈ ರೀತಿಯ ಮಾಡಲಾಗಿದೆ’ ಎಂದೂ ಆರೋಪಿಸಿದ್ದಾರೆ.

‘ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾಗಿರುವ ನಾನು 2017ರ ಜುಲೈ 10ರಂದು ಅಂದಿನ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರಿಗೆ ‘ಲಿಂಗಾಯತ ಪ್ರತ್ಯೇಕ ಧರ್ಮ’ ಕುರಿತಂತೆ ಪತ್ರ ಬರೆದಿದ್ದೇನೆ ಎಂದು ನಕಲಿ ಲೆಟರ್‌ಹೆಡ್‌, ಸಹಿ ಬಳಸಿಕೊಂಡು ನಕಲಿ ಪತ್ರ ಸೃಷ್ಟಿಸಲಾಗಿದೆ. 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲೂ, ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯನ್ನು ಬಿಜೆಪಿ ಮುಖಂಡರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲೂ ಪ್ರಚಾರ ಮಾಡುತ್ತಿದೆ. ನಕಲಿ ಪತ್ರ ಮತ್ತು ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ ಕುರಿತು ಸಮಗ್ರ ವಿಚಾರಣೆ ನಡೆಸಬೇಕು’ ಎಂದೂ ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.