ADVERTISEMENT

ವಾರದೊಳಗೆ ‘ಬಡವರ ಬಂಧು’ಗೆ ರೂಪುರೇಷೆ: ಬಂಡೆಪ್ಪ ಕಾಶೆಂಪೂರ

ಮೀಟರ್ ಬಡ್ಡಿ ದಂಧೆಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:29 IST
Last Updated 17 ಫೆಬ್ರುವರಿ 2019, 20:29 IST
   

ಬೆಂಗಳೂರು: ಇಲ್ಲಿನ ‘ಕೆ.ಆರ್.ಮಾರುಕಟ್ಟೆಯ ವ್ಯಾಪಾರಿಗಳಿಗೆ ‘ಬಡವರ ಬಂಧು’ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಸಂಬಂಧ ಇನ್ನೊಂದು ವಾರದೊಳಗೆ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ವ್ಯಾಪಾರಿಗಳು ‘ಮೀಟರ್ ಬಡ್ಡಿ ಮಾಫಿಯಾ’ದ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಕುರಿತು ‘ಪ್ರಜಾವಾಣಿ’ ಭಾನುವಾರ ವಿಸ್ತೃತ ವರದಿ ಪ್ರಕಟಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ‘ಕೆ.ಆರ್.ಮಾರುಕಟ್ಟೆಯಲ್ಲಿ ಬಡ್ಡಿ ದಂಧೆ ಜೋರಿರುವುದು ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅದಕ್ಕೆ ಮುಕ್ತಿ ಕಾಣಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಬೆಳಿಗ್ಗೆ ಕರೆ ಮಾಡಿ, ‘ಬಡವರ ಬಂಧು ಯೋಜನೆ ಜಾರಿ ವಿಚಾರದಲ್ಲಿ ಕೆ.ಆರ್.ಮಾರುಕಟ್ಟೆ ವ್ಯಾಪಾರಿಗಳಿಗೆ ಆದ್ಯತೆ ನೀಡಿ’ ಎಂದು ಹೇಳಿದರು. ಹೀಗಾಗಿ, ಮಧ್ಯಾಹ್ನವೇ ಯೋಜನೆಯ ನೋಡಲ್ ಅಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಿಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಎಲ್ಲರಿಗೂ ಸಾಲ ನೀಡಲು ಎಷ್ಟು ಹಣ ಬೇಕಾಗುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡುವಂತೆಯೂ ಅವರಿಗೆ ಸೂಚಿಸಿದ್ದೇನೆ. ವಾರದೊಳಗೆ ರೂಪುರೇಷೆ ಸಿದ್ಧವಾಗಲಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ 80 ಸಾವಿರ ಸೇರಿದಂತೆ ರಾಜ್ಯದಲ್ಲಿ ಒಟ್ಟು 4.5 ಲಕ್ಷ ವ್ಯಾಪಾರಿಗಳಿದ್ದಾರೆ. ರಾಜ್ಯದ 17ಸಾವಿರ ವ್ಯಾಪಾರಿಗಳಿಗೆ ಒಟ್ಟು ₹9.52 ಕೋಟಿ ಸಾಲ ನೀಡಿದ್ದೇವೆ ಎಂದರು.

ಮೀಟರ್ ಬಡ್ಡಿ: ಜಾಲತಾಣಗಳಲ್ಲಿ ಕಿಡಿ

‘ಈ ಸರ್ಕಾರಕ್ಕೆ ಮೀಟರ್ ಇದ್ರೆ, ಬಡ್ಡಿ ಮಾಫಿಯಾ ನಿಲ್ಲಿಸಲಿ’, ‘ಬಡ್ಡಿ ವ್ಯವಹಾರದ ಹಣದಲ್ಲೇ ನೀವು ಆಡಳಿತ ನಡೆಸ್ಬೇಕಾ?’, ‘ಖಜಾನೆ ತುಂಬಿತಲ್ಲ. ಈಗ್ಲಾದ್ರೂ ಮಾಫಿಯಾಗೆ ಬ್ರೇಕ್ ಹಾಕ್ಸಿ ಸ್ವಾಮಿ’....

ಬಡ್ಡಿ ದಂಧೆ ಕುರಿತು ಫೇಸ್‌ಬುಕ್ ಬಳಕೆದಾರರು ಶನಿವಾರಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ರಾಜಕಾರಣಿಗಳ ಶ್ರೀರಕ್ಷೆಯಲ್ಲೇ ಮಾಫಿಯಾ ನಡೆಯುತ್ತಿರುವಾಗ ಅದಕ್ಕೆ ಕಡಿವಾಣ ಬೀಳಲು ಹೇಗೆ ಸಾಧ್ಯ? ವ್ಯಾಪಾರಿಗಳು ಬುದ್ಧಿ ಕಲಿಯದ ಹೊರತು, ‘ಮೀಟರ್ ಬಡ್ಡಿ’ ಮರೆಯಾಗಲ್ಲ. ಕುಮಾರಸ್ವಾಮಿ ನಿಜವಾಗಿಯೂ ಜನ ನಾಯಕರೇ ಆಗಿದ್ದರೇ, ತಮ್ಮದೇ ಪಕ್ಷದ ದಂಧೆಕೋರ ಮಾರ್ಕೆಟ್ ವೇಡಿಯನ್ನು ಜೈಲಿಗೆ ಹಾಕಿಸಲಿ’ ಎಂದು ಸೈಯದ್ ಕಾಸೀಂ ಎಂಬುವರು ಸವಾಲುಹಾಕಿದ್ದಾರೆ.

‘ಪೊಲೀಸರು ಮಾಫಿಯಾದಲ್ಲಿ ಭಾಗಿಯಾಗಿದ್ದರೆ ಅಂಥವರನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಿ. ದಕ್ಷ ಅಧಿಕಾರಿಗಳನ್ನು ಹಾಗೂ ದೂರದೂರುಗಳ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಿ, ದಂಧೆ ಮಟ್ಟ ಹಾಕಲು ಅವರಿಗೆ ಪೂರ್ಣ ಸ್ವತಂತ್ರ ಕೊಡಿ’ ಎಂದು ಆಸೀಫ್ ಅಹಮದ್ ಎಂಬುವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.