ಬೆಂಗಳೂರು: ಇತರ ರಾಜ್ಯಗಳಲ್ಲಿ ಕಾನೂನು ಬದ್ಧವಾಗಿ ಉತ್ಪಾದನೆ ಮಾಡಿದ ಖನಿಜಗಳ ಮೇಲಿನ ನಿಯಂತ್ರಣಾ ಶುಲ್ಕ ವಸೂಲಿಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ನಿಯಮಾವಳಿಗೆ 2020ರಲ್ಲಿ ಸರ್ಕಾರ ತಂದಿದ್ದ ತಿದ್ದುಪಡಿ ಪ್ರಶ್ನಿಸಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಎಂ-ಸ್ಯಾಂಡ್ ತಯಾರಕರು ಮತ್ತು ಕರ್ನಾಟಕ dಟಿಪ್ಪರ್ ಲಾರಿ ಮಾಲೀಕರ ಸಂಘ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ತಿದ್ದುಪಡಿ ನಿಯಮಗಳ ಪ್ರಕಾರ ಜಲ್ಲಿ, ಸೈಜು ಕಲ್ಲು, ಎಂ ಸ್ಯಾಂಡ್ ಹಾಗೂ ಇತರ ಖನಿಜಗಳನ್ನು ಹೊರ ರಾಜ್ಯದಿಂದ ರಾಜ್ಯಕ್ಕೆ ಸಾಗಿಸುವಾಗ ಪ್ರತಿ ಟನ್‌ಗೆ ₹70 ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಉತ್ಪಾದನಾ ಘಟಕಗಳನ್ನು ನಿರ್ವಹಿಸಲು ತಮಿಳುನಾಡು ಸರ್ಕಾರದಿಂದ ಅಗತ್ಯ ಪರವಾನಗಿ ಪಡೆದುಕೊಂಡಿದ್ದೇವೆ. ಆದರೆ, ಬೇರೆ ರಾಜ್ಯಗಳಿಗೆ ಖನಿಜ ಸಾಗಣೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಶುಲ್ಕ ಪಡೆಯಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದರು.
ಅಕ್ರಮವಾಗಿ ಖನಿಜ ಸಾಗಣೆ ಮತ್ತು ಸಂಗ್ರಹ ತಡೆಗಟ್ಟುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲಾಗಿದೆ ಎಂದು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಿವರಿಸಿದರು.
ಅಕ್ರಮ ತಡೆಯುವ ಹೆಸರಿನಲ್ಲಿ ಕಾನೂನು ಬದ್ಧವಾಗಿ ಸಾಗಿಸುವ ಖನಿಜಗಳ ಸಾಗಣೆಗೆ ಶುಲ್ಕ ಪಡೆಯಬಾರದು. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.