ADVERTISEMENT

ಮಕ್ಕಳ ಕಲಿಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ನೆರವು

ಅತಿಥಿ ಶಿಕ್ಷಕರಿಗೆ ಗೌರವಧನ ನೀಡುವ ಬಾಲಚಂದ್ರ ಜಾರಕಿಹೊಳಿ

ಎಂ.ಮಹೇಶ
Published 20 ಜನವರಿ 2020, 19:30 IST
Last Updated 20 ಜನವರಿ 2020, 19:30 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಳಗಾವಿ: ಜಿಲ್ಲೆಯ ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಗೌರವಧನ ನೀಡುವ ಕೆಲಸ ಮಾಡುತ್ತ ಬಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ನೀಗಿಸಲು, ಜುಲೈ ಅಂತ್ಯ ಅಥವಾ ಆಗಸ್ಟ್‌ ತಿಂಗಳಿಂದ ನೇಮಕ ಮಾಡಿಕೊಳ್ಳುತ್ತಾರೆ. ಆದರೆ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಶಾಲೆ ಆರಂಭವಾದ ಕೆಲವೇ ದಿನಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಎರಡು ತಿಂಗಳ ಗೌರವಧನ ಶಾಸಕರು ನೀಡುತ್ತಾರೆ.

ಸತಾಯಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಚಾರಿಟಬಲ್‌ ಟ್ರಸ್ಟ್ ಮೂಲಕ ಅವರು ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಬಾರಿ ವಲಯದ 367 ಅತಿಥಿ ಶಿಕ್ಷಕರಿಗೆ ಗೌರವಧನ ನೀಡಲು ₹ 13.50 ಲಕ್ಷವನ್ನು ಈಚೆಗೆ ಅಧಿಕಾರಿಗಳಿಗೆ ನೀಡಿದ್ದಾರೆ.

ADVERTISEMENT

‘ಶಾಸಕರು ಹಲವು ವರ್ಷಗಳಿಂದಲೂ ಈ ಕ್ರಮ ಅನುಸರಿಸುತ್ತಿದ್ದಾರೆ. ಕಲಿಕೆಗೆ ತೊಂದರೆ ಆಗಬಾರದು ಎನ್ನುವುದೇ ಅವರ ಕಾಳಜಿ. ಈ ಭಾಗದ ಅರ್ಹ ಪದವೀಧರರಿಗೆ ಕೆಲಸ, ಪ್ರಾಯೋಗಿಕ ಅನುಭವವೂ ಆಗುತ್ತಿದೆ; ಮಕ್ಕಳಿಗೂ ಅನುಕೂಲ ಆಗುತ್ತಿದೆ. ಆಯಾ ಶಾಲೆಯ ಮುಖ್ಯಶಿಕ್ಷಕರು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳುತ್ತಾರೆ’ ಎಂದು ಮೂಡಲಗಿ ಬಿಇಒ ಅಜಿತ್‌ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದಿಂದ ಆದೇಶ ಬಂದ ನಂತರ ಅಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವವರೂ ಅರ್ಜಿ ಹಾಕಿಕೊಳ್ಳಬಹುದು. ಮೆರಿಟ್‌ ಇದ್ದವರು ಮುಂದುವರಿಯುತ್ತಾರೆ’ ಎನ್ನುತ್ತಾರೆ ಅವರು.

‘ಶಾಸಕರು ಹೆತ್ತವರ ಸ್ಮರಣಾರ್ಥ ಮನ್ನಿಕೇರಿಯಲ್ಲಿ ಸರ್ಕಾರಿ ಪ್ರೌಢಶಾಲೆಗೆ 4 ಎಕರೆ ಜಮೀನು ನೀಡಿದ್ದಾರೆ. ವಲಯದಲ್ಲಿ ವಸತಿಶಾಲೆಗಳನ್ನು ಆರಂಭಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

ಈಚೆಗೆ ಅಡಿಬಟ್ಟಿ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಕೂಡ ಶಾಸಕರ ಶಿಕ್ಷಣ ಪ್ರೇಮವನ್ನು ಶ್ಲಾಘಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.