ADVERTISEMENT

ಮೋದಿ ಭ್ರಷ್ಟಾಚಾರದಲ್ಲಿ ಭಾಗಿದಾರ್, ಚೌಕೀದಾರ ಅಲ್ಲ: ಸಿದ್ದರಾಯಯ್ಯ

ದೇಶದ ಮಹಾನ್ ಸುಳ್ಳುಗಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 7:00 IST
Last Updated 8 ಏಪ್ರಿಲ್ 2019, 7:00 IST
   

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರನ್ನುಇಲ್ಲಿ ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಿಕೊಡಿ ಅಣ್ಣಾ' ಎಂದ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯಗೆ ಮನವಿ ಮಾಡಿದರು.

ರಾಜಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಪರ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸುವ ವೇಳೆಕಾರ್ಯಕರ್ತನ ಕೂಗಿಗೆ ಕಿವಿಕೊಡದೆ ತಮ್ಮ ಭಾಷಣ ಮುಂದುವರಿಸಿದರು.

ಸಿದ್ದರಾಮಯ್ಯ ಮಾತನಾಡಿ, 'ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ಯಾಕೆ ಮೋದಿ ಮುಖ ನೋಡಿ ಹಾಕಿ ಅಂತ ಕೇಳುತ್ತಾರೆ. ಈ ಕ್ಷೇತ್ರದಲ್ಲಿ ಪಿ.ಸಿ. ಮೋಹನ್ ಕೊಡುಗೆ ಏನು ಎಂದು ಪ್ರಶ್ನಿಸಿದರು.

ADVERTISEMENT

'ನನ್ನ ಅವಧಿಯಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ.‌ ಯುವಕರು ಉದ್ಯೋಗ ಕೇಳಿದರೆ ಮೋದಿ, ಅಮಿತ್ ಷಾ ಪಕೋಡ ಮಾರಾಟ ಮಾಡಿ ಎನ್ನುತ್ತಾರೆ. ಮೋದಿ ಭ್ರಷ್ಟಾಚಾರದಲ್ಲಿ ಭಾಗಿದಾರ್, ಚೌಕೀಧಾರ್ ಅಲ್ಲ' ಎಂದು ಟೀಕಿಸಿದರು.

ಶ್ರೀಮಂತರಿಗೆ ಅಚ್ಛೇ ದಿನ ಬಂದಿದೆ ಹೊರತು ಬಡವರಿಗೆ ಬಂದಿಲ್ಲ. ಉದ್ಯಮಿಗಳ ಮೂರುವರೆ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿ ಅಂದ್ರೆ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಜೈಲಿಗೆ ಹೋದವರು ಈಗ ಚೌಕೀದಾರ್ ಆಗಿದ್ದಾರೆ.‌ ಯಡಿಯೂರಪ್ಪ,ಕಟ್ಟಾ ಸುಬ್ರಹಣ್ಣ, ಜನಾರ್ದನ ರೆಡ್ಡಿ, ಶ್ರೀರಾಮುಲು ಚೌಕೀದಾರ್‌ಗಳು ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಒಂದೇ ಒಂದು ದಿನ ಸಂಸತ್‌ನಲ್ಲಿ ಕ್ಷೇತ್ರದ ವಿಷಯದ ಬಗ್ಗೆ ಮಾತನಾಡಿಲ್ಲ. ಇವರನ್ನು ಮತ್ತೆ ಸಂಸತ್‌ಗೆ ಕಳಿಸುತ್ತೀರಾ.‌ ಯಾವ ಕ್ಷೇತ್ರ ಪ್ರತಿನಿಧಿಸುತ್ತಾರೋ ಅಂತಹವರು ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು.‌ ಕೇಂದ್ರದಿಂದ ಏನೇನು ಯೋಜನೆ ತಂದಿದ್ದೇನೆ ಅಂತಾ ಎದೆ ತಟ್ಟಿ ಹೇಳಲಿ‌ ನೋಡೋಣ. ಇವರಿಗೆ ಮತ ಕೇಳಲು ಯಾವ ನೈತಿಕತೆ ಇದೆ ಹೇಳಿ.‌ನರೇಂದ್ರ ಮೋದಿ ನೋಡಿಕೊಂಡು ಯಾಕೆ ಮತ ಹಾಕಬೇಕು. ಏನು ಕೆಲಸ ಮಾಡಿದ್ದಾರೆ ಹೇಳಿ.‌ ಮೋದಿ ಸಾಧನೆ ಸಂಪೂರ್ಣ ಶೂನ್ಯ ಎಂದರು.

ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಯಾರೂ ಇಲ್ಲ. ದೇಶದ ಮಹಾನ್ ಸುಳ್ಳುಗಾರ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.