ADVERTISEMENT

ಬಸ್ ಪ್ರಯಾಣ ದರ ಕಡಿಮೆ: ಮಹಾರಾಷ್ಟ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:46 IST
Last Updated 9 ಸೆಪ್ಟೆಂಬರ್ 2019, 14:46 IST

ಬೆಂಗಳೂರು: ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿದಂತೆ ವಿವಿಧ ಸ್ಥಳಗಳಿಗೆ ಸಂಚರಿಸುವ ‌ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ತಮ್ಮ ನಿಗಮದ ಬಸ್‌ಗಳ ಪ್ರಯಾಣ ದರಕ್ಕಿಂತ ಕಡಿಮೆ ದರ ನಿಗದಿ ಪಡಿಸಿರುವುದಕ್ಕೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್‌ಆರ್‌ಟಿಸಿ) ಆಕ್ಷೇಪ ವ್ಯಕ್ತಪಡಿಸಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಎಂಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಸಿಂಗ್ ಡಿಯೋಲ್ ಈ ಕುರಿತು ಪತ್ರ ಬರೆದಿದ್ದಾರೆ. ಮುಂಬೈ ಮತ್ತು ಬೆಂಗಳೂರು ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಐರಾವತ ವೋಲ್ವೊ ಬಸ್‌ ದರ ₹1,260 ಇದೆ. ಎಂಎಸ್‌ಆರ್‌ಟಿಸಿಯ ಶಿವಶಾಹಿ (ಆರಾಮದಾಯಕ) ಸೀಟರ್‌ ಬಸ್‌ ದರ ₹ 1,874 ಇದೆ.

‘ಮುಂಬೈನಿಂದ ಪುಣೆಯ ಸ್ವಾರ್ಗೇಟ್‌ ನಡುವೆ ಸಂಚರಿಸುವ ವೋಲ್ವೊ ಬಸ್‌ಗೆ ಎಂಎಸ್‌ಆರ್‌ಟಿಸಿ ₹449 ದರ ನಿಗದಿ ಮಾಡಿದ್ದರೆ, ಕೆಎಸ್‌ಆರ್‌ಟಿಸಿ ಕೇವಲ ₹361 ನಿಗದಿ ಮಾಡಿದೆ. ಮುಂಬೈನ ಬೊರಿವಲಿಯಿಂದ ಪುಣೆಯ ಸ್ವಾರ್ಗೇಟ್‌ಗೆ ಎಂಎಸ್‌ಆರ್‌ಟಿಸಿ ಬಸ್‌ಗಿಂತ ₹150 ಕಡಿಮೆ ದರ ಇದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಉಭಯ ರಾಜ್ಯಗಳ ಸಾರಿಗೆ ಸಂಸ್ಥೆಗಳ ನಡುವಿನ ಒಪ್ಪಂದದ ಉಲ್ಲಂಘನೆ ಇದು. ಪ್ರಯಾಣಿಕರು ಹಾಗೂ ಎಂಎಸ್‌ಆರ್‌ಟಿಸಿ ಹಿತದೃಷ್ಟಿಯಿಂದ ಕೂಡಲೇ ಪ್ರಯಾಣ ದರವನ್ನು ಹೆಚ್ಚಳ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಖಾಸಗಿ ಬಸ್‌ಗಳಿಗಿಂತ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ನ ಪ್ರಯಾಣ ದರ ₹100 ಹೆಚ್ಚಿದೆ. ಆದರೂ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ನಮ್ಮ ಬಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎಂಎಸ್‌ಆರ್‌ಟಿಸಿ ಹೇಳುವಂತೆ ₹600 ಹೆಚ್ಚಳ ಮಾಡಿದರೆ ಪ್ರಯಾಣಿಕರು ನಮ್ಮ ಬಸ್ ಹತ್ತುವುದಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ. ಪ್ರತಿನಿತ್ಯ ಬೆಂಗಳೂರಿನಿಂದ ಮುಂಬೈಗೆ 3, ಪುಣೆಗೆ 3, ಶಿರಡಿ ಮತ್ತು ಕೊಲ್ಲಾಪುರಕ್ಕೆ ತಲಾ 1 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.