ADVERTISEMENT

ಎನ್‌ಇಪಿ: ಬಡವರಿಗೆ ಉನ್ನತ ಶಿಕ್ಷಣ ದೂರ

ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್‌ ಥೋರಟ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 14:42 IST
Last Updated 30 ಅಕ್ಟೋಬರ್ 2021, 14:42 IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹೆಸರಿನಲ್ಲಿ ದೇಶದ ಬಡವರು ಮತ್ತು ಮಧ್ಯಮ ವರ್ಗದಲ್ಲಿನ ದೊಡ್ಡ ಸಂಖ್ಯೆಯ ಜನರನ್ನು ಉನ್ನತ ಶಿಕ್ಷಣದಿಂದ ದೂರ ಮಾಡುವ ಕೆಲಸ ನಡೆಯುತ್ತಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ ಪ್ರೊ. ಸುಖದೇವ್‌ ಥೋರಟ್‌ ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ‘ಎನ್‌ಇಪಿಯ ವಿನಾಶಕಾರಿ ಪರಿಣಾಮಗಳು’ ಕುರಿತು ಶನಿವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು,‘ಎನ್‌ಇಪಿ ರೂಪಿಸಿದ ಸಮಿತಿಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ನಗರಗಳು ಮತ್ತು ಪಟ್ಟಣಗಳಲ್ಲೇ ಉನತ್ತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಸ್ತಾವ ನೀತಿಯಲ್ಲಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗಗಳ ಯುವಜನರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ’ ಎಂದರು.

2016ರಿಂದಲೇ ದೇಶದಲ್ಲಿ ಶಿಕ್ಷಣದ ಖಾಸಗೀಕರಣ ವ್ಯಾಪಕವಾಗಿ ನಡೆಯುತ್ತಿದೆ. 100 ವಿದೇಶಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಅವಕಾಶ ನೀಡುವ ಕಾರ್ಯಕ್ರಮವೂ ಇದರ ಭಾಗ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಮಾತನಾಡುತ್ತಲೇ ಸಮಾಜದ ಕೆಳ ಸ್ತರದಲ್ಲಿರುವವರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಪ್ರಯತ್ನ ಇದರಲ್ಲಿ ಅಡಗಿದೆ. ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಜಾತಿವಾರು ಸಂಖ್ಯೆಯನ್ನು ಪರಿಶೀಲಿಸಿದರೆ ವಾಸ್ತವ ಗೊತ್ತಾಗುತ್ತದೆ ಎಂದು ಹೇಳಿದರು.

ADVERTISEMENT

ಇತಿಹಾಸ ತಜ್ಞೆ ಪ್ರೊ. ರೋಮಿಲಾ ಥಾ‍ಪರ್‌ ಮಾತನಾಡಿ, ‘ಶಿಕ್ಷಣದ ಹೆಸರಿನಲ್ಲಿ ಉತ್ಪ್ರೇಕ್ಷೆ ಮತ್ತು ಪುರಾಣದಂತಹ ವಿಚಾರಗಳನ್ನು ಇತಿಹಾಸ ಎಂದು ಬೋಧಿಸಬಾರದು. ವೈಜ್ಞಾನಿಕ ವಿಧಾನದಲ್ಲೇ ಚರಿತ್ರೆಯ ಮರುಶೋಧ ನಡೆಯಬೇಕು. ಖಚಿತವಲ್ಲದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಹೇಳುವ ಯಾವ ಸಂಗತಿಯನ್ನೂ ಇತಿಹಾಸ ಎನ್ನಲಾಗದು’ ಎಂದರು.

ಇತಿಹಾಸ ತಜ್ಞ ಪ್ರೊ. ಕರ್ಣಾನಂದನ್‌, ಶಿಕ್ಷಣ ತಜ್ಞರಾದ ಪ್ರೊ.ಎಲ್‌. ಜವಾಹರ್‌ ನೇತನ್‌, ಪ್ರೊ ಸಚ್ಚಿದಾನಂದ ಸಿನ್ಹ, ಪ್ರೊ. ಚಂದ್ರಶೇಖರ ಚಕ್ರವರ್ತಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ. ಅನೀಶ್‌ ಕುಮಾರ್‌ ರೇ ಉಪಸ್ಥಿತರಿದ್ದರು.

ನಾಝಿ ಕಾಲದ ಜರ್ಮನಿಯಂತೆ ನಡೆಯುತ್ತಿದೆ: ಇರ್ಫಾನ್ ಹಬೀಬ್
‘ಎನ್‌ಇಪಿ ಭಾಗವಾಗಿ ರಾಷ್ಟ್ರೀಯವಾದದ ಹೆಸರಿನಲ್ಲಿ ಇತಿಹಾಸ ಪಠ್ಯಗಳನ್ನೇ ತಿರುಚುವ ಪ್ರಯತ್ನ ನಡೆದಿದೆ. ಇತಿಹಾಸದ ಹೆಸರಿನಲ್ಲಿ ಕೆಲವು ನಿರ್ದಿಷ್ಟ ಅಭಿಪ್ರಾಯಗಳನ್ನು ಹೇರಲಾಗುತ್ತಿದೆ. ನಾಝಿ ಆಡಳಿತ ಕಾಲದ ಜರ್ಮನಿಯಂತೆ ಎಲ್ಲವೂ ನಡೆಯುತ್ತಿದೆ’ ಎಂದು ಇತಿಹಾಸ ತಜ್ಞ ಪ್ರೊ. ಇರ್ಫಾನ್‌ ಹಬೀಬ್‌ ಹೇಳಿದರು.

ಸಂಕುಚಿತ ಮತ್ತು ಕೋಮು ಪ್ರೇರಿತ ಅಭಿಪ್ರಾಯಗಳಿಗೆ ಮಹತ್ವ ನೀಡಲಾಗುತ್ತಿದೆ. ಭಾರತದಲ್ಲಿ ಬೆಳೆದುಬಂದ ಜ್ಞಾನವನ್ನು ‘ರಾಷ್ಟ್ರೀಯವಾದ’ದ ಹೆಸರಿನಲ್ಲಿ ಮೂಲೆಗುಂಪು ಮಾಡುವ ಪ್ರಯತ್ನ ಈ ನೀತಿಯಲ್ಲಿದೆ. ಇತಿಹಾಸ ಎಂಬುದು ಕೇವಲ ರಾಜಕೀಯ, ಧರ್ಮ ಮತ್ತು ರಾಷ್ಟ್ರೀಯವಾದದ ಆಧಾರದಲ್ಲಿ ರಚನೆಯಾಗಿಲ್ಲ. ಇತಿಹಾಸದ ಕುರಿತು ಗೊಂದಲ ಸೃಷ್ಟಿಸಿ, ಮಿಥ್ಯೆಗಳನ್ನೇ ಚರಿತ್ರೆ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಎನ್‌ಇಪಿ ಹೆಸರಿನಲ್ಲಿ ಭಾರತೀಯ ಇತಿಹಾಸವನ್ನು ಸಂಪೂರ್ಣವಾಗಿ ಅಪವ್ಯಾಖ್ಯಾನ ಮಾಡಲಾಗುತ್ತಿದೆ.ಸಾಂಸ್ಕೃತಿಕ ಇತಿಹಾಸವನ್ನು ಶಿಕ್ಷಣದಿಂದ ಸಂಪೂರ್ಣ ಹೊರಗಿಡಲಾಗುತ್ತಿದೆ ಇದು ಖಂಡನೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.