ADVERTISEMENT

ಸ್ವಾಮೀಜಿ ಫೋನ್ ಕದ್ದಾಲಿಸಿಲ್ಲ: ಎಚ್‌ಡಿಕೆ

ಬಿಜೆಪಿ ನಾಯಕ ಅಶೋಕ ಹೇಳಿಕೆಯಿಂದ ನೋವಾಗಿದೆ: ಟ್ವೀಟ್‌ ಮೂಲಕ ತರಾಟೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:33 IST
Last Updated 29 ಸೆಪ್ಟೆಂಬರ್ 2019, 19:33 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥರ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಭಾನುವಾರ ಮೌನ ಮುರಿದಿದ್ದು, ‘ಸ್ವಾಮೀಜಿ ನನ್ನ ಮಾರ್ಗದರ್ಶಕರಾಗಿದ್ದರು, ಅವರ ವಿರುದ್ಧ ಅನುಮಾನದ ಹೆಜ್ಜೆ ಇಡಲು ಸಾಧ್ಯವೇ ಇಲ್ಲ. ಆದರೆ, ರಾಜಕೀಯ ನಾಯಕರ ಹೇಳಿಕೆಗಳಿಂದ ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟಾಗಿದೆ’ ಎಂದಿದ್ದಾರೆ.

ತಮ್ಮ ವಿರುದ್ಧ ಅನುಮಾನ ಮೂಡುವಂತೆ ಮಾತನಾಡಿರುವ ಕಂದಾಯ ಸಚಿವ ಆರ್‌.ಅಶೋಕ್‌ ವಿರುದ್ಧ ಸರಣಿ ಟ್ವೀಟ್‌ಗಳ
ಮೂಲಕ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಹಿಂದಿನ ಸರ್ಕಾರ ಆದಿಚುಂಚನಗಿರಿ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆ ಮಾಡುವ ಮೂಲಕ ನಾಚಿಕೆಗೇಡಿನ ಕೃತ್ಯಕ್ಕೆ ಕೈ ಹಾಕಿತ್ತು. ಇದು ನಾಡಿನ ಜನರೇ ತಲೆ ತಗ್ಗಿಸುವ ಪ್ರಕರಣ’ ಎಂದು ಅಶೋಕ್‌ ಹೇಳಿದ್ದರು. ಅಲ್ಲದೆ, ಮುಖ್ಯಮಂತ್ರಿ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರೂ ಭಾನುವಾರ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

‘ನನ್ನ ಅಧಿಕಾರವಧಿಯಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ನಡೆದಿತ್ತು ಎಂಬ ವರದಿಗಳು, ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿವೆ. ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ‌’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಪ್ಪೊಂದಕ್ಕೆ ಅಶೋಕ್ ಅವರು ಎಲ್ಲರಿಗಿಂತಲೂ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ. ಅದೇ ಹೊತ್ತಲ್ಲೇ ಶ್ರೀಗಳಿಗಾಗುತ್ತಿರುವ ಬೇಸರಕ್ಕೆ ಅತೀವ ನೋವಿದೆ’ ಎಂದಿದ್ದಾರೆ.

ಕ್ಷಮೆ ಕೇಳಿದ್ದ ಅಶೋಕ್‌: ‘ಭಯೋತ್ಪಾದಕರು, ಸಮಾಜಘಾತುಕರು, ಕಳ್ಳಸಾಗಣೆದಾರರ ದೂರವಾಣಿ ಕರೆಗಳ ಕದ್ದಾಲಿಕೆ ಮಾಡುವುದರಲ್ಲಿ ತಪ್ಪಿಲ್ಲ, ಆದರೆ, ರಾಜಕೀಯ ಉದ್ದೇಶಕ್ಕಾಗಿ ನಿರ್ಮಲಾನಂದನಾಥ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಯಾವುದೇ ಸರ್ಕಾರ ಇಂತಹ ನೀಚ ಕೆಲಸ ಮಾಡಿದರೂ ಅದು ತಪ್ಪೇ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಹಿಂದಿನ ಸರ್ಕಾರ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತೇನೆ’ ಎಂದು ಅಶೋಕ್‌ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಶ್ರೀಗಳ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೆಂದ್ರ ಅವರೂ ಈ ಕುರಿತು ಪ್ರತಿಕ್ರಿಯೆ ನೀಡಿದ್ದು , ‘ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯಬಹುದು ಎನ್ನುವುದರಲ್ಲಿ ಕುಮಾರಸ್ವಾಮಿಯವರಿಗೆ ಸರಿಸಾಟಿಯಿಲ್ಲ. ಇಡೀ ದೇಶದ ಗೌರವಕ್ಕೆ ಪಾತ್ರರಾಗಿರುವ ಶ್ರೀಗಳ ಫೋನ್ ಕದ್ದಾಲಿಸಿದ್ದು ಮಾತ್ರವಲ್ಲದೆ, ಸ್ಮಗ್ಲರ್ ಗಳ ಪಟ್ಟಿಯಲ್ಲಿ ಸೇರಿಸಿ, ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಅವರಲ್ಲಿ ಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಮೊದಲು ಗುರುಗಳ ಕ್ಷಮೆ ಕೇಳಲಿ’ ಎಂದಿದ್ದಾರೆ.

**

ಆದಿಚುಂಚನಗಿರಿ ಸ್ವಾಮೀಜಿ ನನ್ನ ಮಾರ್ಗದರ್ಶಕರು ಮತ್ತು ಹಿತೈಷಿಗಳು ಅವರನ್ನು ಅನುಮಾನಿಸಲು ಸಾಧ್ಯವೇ?
- ಎಚ್‌.ಡಿ.ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.