ADVERTISEMENT

ಆಗದ ನೇಮಕಾತಿ: ಸೊರಗುತಿದೆ ಆಡಳಿತಾಂಗ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮು ಆತಂಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:12 IST
Last Updated 6 ಜನವರಿ 2019, 13:12 IST
ಮೈಸೂರಿನಲ್ಲಿ ಭಾನುವಾರ ನಡೆದ 57ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮು ಉದ್ಘಾಟಿಸಿದರು. ಡಾ.ಸಿ.ಪಿ.ನಂಜರಾಜ್, ಸಿ.ಎಲ್.ಸೋಮಶೇಖರ್, ಎಸ್.ಮಂಜುನಾಥ್ ಇದ್ದಾರೆ
ಮೈಸೂರಿನಲ್ಲಿ ಭಾನುವಾರ ನಡೆದ 57ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮು ಉದ್ಘಾಟಿಸಿದರು. ಡಾ.ಸಿ.ಪಿ.ನಂಜರಾಜ್, ಸಿ.ಎಲ್.ಸೋಮಶೇಖರ್, ಎಸ್.ಮಂಜುನಾಥ್ ಇದ್ದಾರೆ   

ಮೈಸೂರು: ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇದ್ದಲ್ಲಿ ಆಡಳಿತಾಂಗ ಸೊರಗುವ ಭೀತಿ ಎದುರಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ಫಾರ್ಮಸಿಸ್ಟ್‌ಗಳ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಶಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ 57ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ಆಡಳಿತದ ವಿಚಾರದಲ್ಲಿ ರಾಜಕಾರಣ ಮಾಡುವುದರಿಂದಲೇ ಈ ಸಮಸ್ಯೆ ಎದುರಾಗಿದೆ. ಖಾಲಿ ಹುದ್ದೆಗಳನ್ನು ತುಂಬುವಲ್ಲಿ ವಿಳಂಬ ನೀತಿ ಅನುಸರಿಸುವುದು, ಇತರೆ ಲಾಭ ನಿರೀಕ್ಷೆ ಮಾಡುವುದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹುದ್ದೆಗಳು ಖಾಲಿ ಉಳಿದಿರುವುದರಿಂದ ಹಾಲಿ ನೌಕರರು ಒತ್ತಡದಿಂದ ಕೆಲಸ ಮಾಡುವಂತೆ ಆಗಿದೆ ಎಂದು ಅವರು ಬೇಸರದಿಂದ ಹೇಳಿದರು.

ADVERTISEMENT

ರಾಜ್ಯದಲ್ಲಿ ಹಾಲಿ 7.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಹಾಲಿ 5.35 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಕನಿಷ್ಠ 15 ಸಾವಿರ ಮಂದಿ ನಿವೃತ್ತರಾಗಿದ್ದಾರೆ. ಇದರಿಂದಾಗಿ ಕಾರ್ಯಭಾರವು ಉಳಿದಿರುವ ನೌಕರರ ಮೇಲೆ ಬೀಳುತ್ತಿದ್ದು, ಕೆಲಸ ಮಾಡುವುದು ಕಷ್ಟಕರವಾಗುತ್ತಿದೆ. ಸರ್ಕಾರವು ಶೀಘ್ರವೇ ನೇಮಕಾತಿಗಳನ್ನು ಆದ್ಯತೆಯ ಮೇಲೆ ನಡೆಸಿ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಬೇಕು ಎಂದು ಅವರು ಮನವಿ ಮಾಡಿದರು.

‘ಅಲ್ಲದೇ, ಅಧಿಕಾರಿಗಳಲ್ಲಿ ಹಲವರಿಗೆ ಬಡ್ತಿ ಸಿಕ್ಕಿ ಸಾಕಷ್ಟು ವರ್ಷಗಳಾಗಿವೆ. ಮುಂಬಡ್ತಿಯೂ ಸಿಕ್ಕಿಲ್ಲ. ಆದರೆ, ನಮ್ಮಿಂದ ಪ್ರಗತಿವರದಿಯನ್ನು ಮಾತ್ರ ಚಾಚೂ ತಪ್ಪದೇ ಕೇಳುತ್ತಾರೆ. ಉದ್ಯೋಗದಲ್ಲಿ ಪ್ರೋತ್ಸಾಹ ನೀಡಿದರೆ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ’ ಎಂದು ಅವರು ಮನವಿ ಮಾಡಿಕೊಂಡರು.

ಸಂಘದ ಗೌರವಾಧ್ಯಕ್ಷ ವಿ.ಮಂಜುನಾಥ್ ಅವರು ಔಷಧ ವ್ಯಾಪಾರಿಗಳ ಬೇಡಿಕೆಗಳನ್ನು ಮಂಡಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್‌ ಡಾ.ಸಿ.ಪಿ.ನಂಜರಾಜ್, ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಸಿ.ಎಲ್.ಸೋಮಶೇಖರ್, ರಾಜ್ಯ ಪರಿಷತ್ ಸದಸ್ಯ ಎಸ್.ಮಂಜುನಾಥ್, ಖಜಾಂಚಿ ಡೊಳ್ಳು ಚೆನ್ನಯ್ಯ, ರಾಜ್ಯ ಕಾರ್ಯಾಧ್ಯಕ್ಷ ಎ.ಪುಟ್ಟಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.