ADVERTISEMENT

ಒಪ್ಪದ ‘ಕೈ’: ಕ್ಷೇತ್ರ ಕಗ್ಗಂಟು

16ಕ್ಕೆ ಕೇಂದ್ರ ಚುನಾವಣಾ ಸಮಿತಿಯಲ್ಲಿ ತೀರ್ಮಾನ: ಬೀದರ್‌ನಿಂದ ಖಂಡ್ರೆ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 19:41 IST
Last Updated 11 ಮಾರ್ಚ್ 2019, 19:41 IST
   

ನವದೆಹಲಿ/ಬೆಂಗಳೂರು: ಹಾಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಪಟ್ಟು ಹಿಡಿದಿದ್ದು, ಇದರಿಂದಾಗಿ ಕ್ಷೇತ್ರ ಹಂಚಿಕೆ ಕಗ್ಗಂಟು ಜಟಿಲವಾಗಿದೆ.

ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬಿಜೆಪಿ ಹಿಡಿತದಲ್ಲಿರುವ ಮೈಸೂರು, ಬೆಂಗಳೂರು ಉತ್ತರ, ವಿಜಯಪುರ, ಉತ್ತರಕನ್ನಡ ಇವುಗಳ ಪೈಕಿ ಯಾವುದಾದರೂ ನಾಲ್ಕು ಕ್ಷೇತ್ರಗಳಿಗೆ ಜೆಡಿಎಸ್‌ ವರಿಷ್ಠರು ಹಕ್ಕೊತ್ತಾಯ ಮಂಡಿಸಿದ್ದಾರೆ. ಈ ಕುರಿತು ಪಕ್ಷದ ಮುಖಂಡರೊಂದಿಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದ ಕಾಂಗ್ರೆಸ್‌ ಪರಿಶೀಲನಾ ಸಮಿತಿಯು, ಸೋಮವಾರ ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ಸಭೆ ನಡೆಸಿ ಚರ್ಚಿಸಿದರೂ ಸೀಟು ಹಂಚಿಕೆ ಗೋಜಲು ಬಗೆಹರಿಯಲಿಲ್ಲ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ವೀರಪ್ಪ ಮೊಯಿಲಿ, ಸಚಿವರಾದ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ, ಕೃಷ್ಣ ಬೈರೇಗೌಡ ಅವರ ಜತೆ ಪ್ರತ್ಯೇಕವಾಗಿ ಚರ್ಚಿಸಿದ ವೇಣುಗೋಪಾಲ್‌, ಸೀಟು ಹಂಚಿಕೆ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ADVERTISEMENT

2014ರ ಚುನಾವಣೆಯಲ್ಲಿ ಮೋದಿ ಅಲೆಯ ಮಧ್ಯೆಯೂ ಪಕ್ಷವು ರಾಜ್ಯದಲ್ಲಿ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅವುಗಳಲ್ಲಿ ಒಂದನ್ನೂ ಬಿಟ್ಟುಕೊಡಕೂಡದು ಎಂಬ ಅಭಿಪ್ರಾಯವನ್ನೇ ಬಹುತೇಕ ಮುಖಂಡರು ವ್ಯಕ್ತಪಡಿಸಿದರು ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ಮಿಕ್ಕ ಕ್ಷೇತ್ರಗಳ ಸ್ಪರ್ಧೆಗೆ ಆಕಾಂಕ್ಷಿಗಳ ದಂಡೇ ಇರುವುದರಿಂದ ಅಭ್ಯರ್ಥಿಗಳ ಆಯ್ಕೆ ಕುರಿತೂ ತೀವ್ರ ಚರ್ಚೆ ನಡೆಸಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗಲಿಲ್ಲ ಎಂದು ಮುಖಂಡರೊಬ್ಬರು ಹೇಳಿದರು.

‘ಸೀಟು ಹಂಚಿಕೆ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಇದೇ 16ರಂದು ದೆಹಲಿಯಲ್ಲಿ ನಡೆಯಲಿರುವ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ, ಕ್ಷೇತ್ರ ಹಂಚಿಕೆ ಮತ್ತು ಪಕ್ಷದ ಅಭ್ಯರ್ಥಿಗಳ ಪಟ್ಟಿ ಕುರಿತ ನಿರ್ಧಾರ ಪ್ರಕಟಿಸಲಾಗುತ್ತದೆ’ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಈಶ್ವರ ಖಂಡ್ರೆ ಅವರನ್ನು ಬೀದರ್‌ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಉತ್ತರ’ಕ್ಕೆ ಬರಲು ಗೌಡರ ಮೇಲೆ ಒತ್ತಡ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವಂತೆ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಮೇಲೆ ಪಕ್ಷದ ಶಾಸಕರು, ಪ್ರಮುಖರು ಒತ್ತಡ ಹಾಕಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕರಾದ ಕೆ.ಗೋಪಾಲಯ್ಯ, ಆರ್. ಮಂಜುನಾಥ್ ಹಾಗೂ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

‘ಬೆಂಗಳೂರು ಉತ್ತರ, ಮೈಸೂರು–ಕೊಡಗು ಹಾಗೂ ತುಮಕೂರು ಕ್ಷೇತ್ರಗಳ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ತೀರ್ಮಾನ ಮಾಡಿಲ್ಲ’ ಎಂದು ದೇವೇಗೌಡರು ಹೇಳಿದರು.

ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್‌ ಅವರನ್ನು ಕಣಕ್ಕೆ ಇಳಿಸಲು ಕ್ಷೇತ್ರದ ವ್ಯಾಪ್ತಿಯ ಬಿಜೆಪಿಯ ಶಾಸಕರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.

ಆರ್. ಅಶೋಕ್ ಮನೆಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಶಾಸಕರಾದ ವಿ. ಸೋಮಣ್ಣ, ಸತೀಶ್‌ ರೆಡ್ಡಿ, ಎಲ್.ಎ. ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್ ಭಾಗಿಯಾಗಿದ್ದರು.

‘ತೇಜಸ್ವಿನಿ ಹೆಸರನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡಲು ಸಭೆ ನಿರ್ಧರಿಸಿದೆ’ ಎಂದು ಉದಯ ಗರುಡಾಚಾರ್ ತಿಳಿಸಿದರು.

‘ಮಂಗಳವಾರದಿಂದಲೇ ತೇಜಸ್ವಿನಿ ಅವರ ಪರವಾಗಿ ಪ್ರಚಾರ ನಡೆಸಲಿದ್ದೇವೆ’ ಎಂದು ವಿ. ಸೋಮಣ್ಣ ತಿಳಿಸಿದರು.

ಕುತೂಹಲದ ಭೇಟಿ

ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ, ಕಾಂಗ್ರೆಸ್‌ನ ಎನ್. ಚಲುವರಾಯಸ್ವಾಮಿ ಅವರು ಬಿಜೆಪಿ ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ ಮತ್ತು ರಾಜೂಗೌಡ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

‘ಊಟಕ್ಕೆ ಹೋದಾಗ ಭೇಟಿಯಾಗಿದ್ದೇವೆ, ವಿಶೇಷ ಅರ್ಥ ಬೇಡ’ ಎಂದು ಎಲ್ಲರೂ ಹೇಳಿಕೊಂಡಿದ್ದಾರೆ.

ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ವಿರೋಧ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಈ ನಾಯಕರ ಭೇಟಿಗೆ ಬೇರೆ ಬೇರೆ ಆಯಾಮಗಳು ಕಾಣಿಸಿಕೊಂಡಿವೆ.

***


ಪಕ್ಷದ ಹಾಲಿ ಸಂಸದರಿಗೆ ಟಿಕೆಟ್‌ ತಪ್ಪಿಸಕೂಡದು, ಹಾಲಿ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಲಾಗಿದೆ
-ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ಕ್ಷೇತ್ರ ಹಂಚಿಕೆ ಕುರಿತು ರಾಹುಲ್ ಗಾಂಧಿ ಅವರ ಜತೆ ಚರ್ಚಿಸಿದ್ದೇನೆ. ಇನ್ನು ಎರಡುಮೂರು ದಿನಗಳಲ್ಲಿ ಕ್ಷೇತ್ರ ಹಂಚಿಕೆ ವಿಷಯ ಸೌಹಾರ್ದಯುತವಾಗಿ ಇತ್ಯರ್ಥವಾಗಲಿದೆ
-ಎಚ್.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.