ADVERTISEMENT

ಆನಂದ್‌ ಪುತ್ರನ ಮದುವೆಗೆ ಆಕ್ಷೇಪ

ಡಿ.1ರಂದು ನಡೆಯಲಿರುವ ವಿವಾಹ: 40 ಸಾವಿರ ಜನ ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 20:45 IST
Last Updated 23 ನವೆಂಬರ್ 2019, 20:45 IST
ಶುಕ್ರವಾರ ಗೃಹಪ್ರವೇಶವಾಗಿರುವ ಆನಂದ್‌ ಸಿಂಗ್‌ ಅವರ ಬೃಹತ್‌ ಬಂಗಲೆ
ಶುಕ್ರವಾರ ಗೃಹಪ್ರವೇಶವಾಗಿರುವ ಆನಂದ್‌ ಸಿಂಗ್‌ ಅವರ ಬೃಹತ್‌ ಬಂಗಲೆ   

ಹೊಸಪೇಟೆ: ಡಿಸೆಂಬರ್‌ 1ರಂದು ನಗರದಲ್ಲಿ ನಡೆಯಲಿರುವ, ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರ ಮಗನ ಅದ್ದೂರಿ ಮದುವೆಗೆ ಕಾಂಗ್ರೆಸ್‌ ಶನಿವಾರ ಆಕ್ಷೇಪ ವ್ಯಕ್ತಪಡಿಸಿದೆ.

ಈಗಾಗಲೇ ಈ ಸಂಬಂಧ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್‌ ಹಾಗೂ ಸಾಮಾಜಿಕ ಹೋರಾಟಗಾರ ಯೋಗೀಶಗೌಡ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ, ಮದುವೆ ರದ್ದುಪಡಿಸಲು ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೇಶ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್‌. ಉಗ್ರಪ್ಪ,‘ಮತದಾರರಿಗೆ ಊಟ ಹಾಕಿಸುವುದು, ಉಡುಗೊರೆ ಕೊಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಹಾಗಾಗಿ ಚುನಾವಣಾ ಆಯೋಗ ಅದಕ್ಕೆ ಆಸ್ಪದ ಮಾಡಿಕೊಡಬಾರದು. ಈ ಕುರಿತು ಪಕ್ಷದ ವತಿಯಿಂದ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಮೂರು ಸಲ ಗೆದ್ದಿರುವ ಆನಂದ್‌ ಸಿಂಗ್‌ ಅವರ ದೊಡ್ಡ ಕೊಡುಗೆ ಏನೆಂದರೆ ನಗರದಲ್ಲಿ ದೊಡ್ಡ ಬಂಗಲೆ ನಿರ್ಮಿಸಿ, ಗೃಹ ಪ್ರವೇಶ ಮಾಡಿರುವುದು. ಈಗ ಮಗನ ಅದ್ದೂರಿ ಮದುವೆಗೆ ಮುಂದಾಗಿರುವುದು’ ಎಂದು ವ್ಯಂಗ್ಯವಾಡಿದರು.

ಮದುವೆಗೆ ಸುಮಾರು 40 ಸಾವಿರ ಜನರಿಗೆ ಈಗಾಗಲೇ ಆಮಂತ್ರಣ ಪತ್ರಿಕೆ ಕೊಡಲಾಗಿದೆ. ಹೊಸದಾಗಿ ನಿರ್ಮಿಸಿರುವ ಬಂಗಲೆ ಹಿಂದುಗಡೆಯ ವಿಶಾಲ ಮೈದಾನದಲ್ಲಿ ಎರಡು ವಾರಗಳಿಂದ ಬೃಹತ್‌ ಶಾಮಿಯಾನ ಹಾಕುವ ಕೆಲಸ ನಡೆದಿದೆ.

ಈ ಸಂಬಂಧಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಅವರನ್ನು ಸಂಪರ್ಕಿಸಿದಾಗ, ‘ಮದುವೆಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಊಟೋಪಚಾರಕ್ಕೂ ಸಮಸ್ಯೆಯಿಲ್ಲ. ಆದರೆ, ಯಾರಿಗೂ ಉಡುಗೊರೆ ಕೊಡಬಾರದು. ಮದುವೆ ದಿನ ನಮ್ಮ ಸಿಬ್ಬಂದಿ ಪ್ರತಿಯೊಂದನ್ನು ಗಮನಿಸುವರು. ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.