ADVERTISEMENT

ಭತ್ತದ ಸಸಿಮಡಿ ದುಪ್ಪಟ್ಟಾಯ್ತು!

ಕಾಲುವೆಯಲ್ಲಿ ನೀರು ಬಂದು ಹೆಚ್ಚಾಯ್ತು ಬಿತ್ತನೆ ಕೂಲಿ ದರ

ಕೆ.ನರಸಿಂಹ ಮೂರ್ತಿ
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST
ಸಿರುಗುಪ್ಪ ತಾಲ್ಲೂಕಿನ ಭೈರಾಪುರದಲ್ಲಿ ಗುರುವಾರ ಭತ್ತದ ಸಸಿ ನಾಟಿ ಕಾರ್ಯ ಭರದಿಂದ ನಡೆದಿತ್ತು.
ಸಿರುಗುಪ್ಪ ತಾಲ್ಲೂಕಿನ ಭೈರಾಪುರದಲ್ಲಿ ಗುರುವಾರ ಭತ್ತದ ಸಸಿ ನಾಟಿ ಕಾರ್ಯ ಭರದಿಂದ ನಡೆದಿತ್ತು.   

ಸಿರುಗುಪ್ಪ: ನದಿ ಮತ್ತು ಕಾಲುವೆಗಳಲ್ಲಿ ಅನಿರೀಕ್ಷಿತವಾಗಿ ಜಲಾಶಯದ ನೀರು ಹರಿದ ಪರಿಣಾಮವಾಗಿ ತಾಲ್ಲೂಕಿನಲ್ಲಿ ಭತ್ತದ ಸಸಿಮಡಿಗಳ ದರ ಧುತ್ತನೆ ದುಪ್ಪಟ್ಟಾಗಿದೆ. ಸಸಿ ಮಡಿ ನಾಟಿ ಮಾಡುವ ಕೂಲಿಯಾಳುಗಳ ದರವೂ ಹೆಚ್ಚಾಗಿದೆ. ಮಳೆಯೂ ಇಲ್ಲದೆ, ಕಾಲುವೆ ನೀರು ವಿಳಂಬವಾಗಿ ಬರುವ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಈ ಸನ್ನಿವೇಶ ಸಂಕಟವನ್ನು ಸೃಷ್ಟಿಸಿದೆ.

‘ಮಳೆ ಬಂದ ಕಾಲಕ್ಕೆ ಅಥವಾ ಜಲಾಶಯ ತುಂಬಿ ಕಾಲುವೆಗಳಲ್ಲಿ ನೀರು ತುಂಬಿ ಕಾಲುವೆಗೆ ನೀರು ಬಂದ ಕಾಲಕ್ಕೆ ಸಸಿ ಮಡಿ ಖರೀದಿಸಿದರಾಯ್ತು’ ಎಂದು ಕಾಯುತ್ತಿದ್ದ ರೈತರಿಗೆ ಪ್ರವಾಹದ ರೂಪದಲ್ಲಿ ಬಂದ ನೀರು ದಿಢೀರನೆ ಭತ್ತ ಬಿತ್ತಲೇಬೇಕಾದ ಸನ್ನಿವೇಶವನ್ನು ಮುಂದಿಟ್ಟಿದೆ. ಅದರ ಪರಿಣಾಮವಾಗಿ, ಸಸಿಮಡಿಗಳನ್ನು ಖರೀದಿ ಮಾಡಲು ಮುಂದಾದವರಿಗೆ ದುಬಾರಿ ದರ ಎದುರಾಗಿದೆ.

ಒಂದು ಸೆಂಟ್‌ ಜಾಗದಲ್ಲಿ ಬೆಳೆಸಿದ ಸಸಿಮಡಿಗಳನ್ನು ಅರ್ಧ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಬಹುದು. ಆ ಪ್ರಮಾಣದ ಸೋನಾಮಸೂರಿ ಸಸಿಮಡಿಗಳ ದರ ಹಿಂದಿನ ವರ್ಷ ₹1.5 ಸಾವಿರವಿತ್ತು. ಈ ವರ್ಷ ಏಕಾಏಕಿ ₹3 ಸಾವಿರಕ್ಕೆ ಏರಿದೆ. ಒಂದು ಎಕರೆಯಲ್ಲಿ ಬಿತ್ತನೆ ಮಾಡಲು ಎರಡು ಸೆಂಟ್‌ನಷ್ಟು ಸಸಿಮಡಿ ಖರೀದಿಸಲು ಈಗ ₹6 ಸಾವಿರ ಬೇಕಾಗಿದೆ. ಸಸಿಮಡಿಗಳನ್ನು ಕಿತ್ತು ಜಮೀನಿನಲ್ಲಿ ನಾಟಿ ಮಾಡಲು ಹಿಂದಿನ ವರ್ಷ ಪ್ರತಿ ಎಕರೆಗೆ ಕೂಲಿಯಾಳುಗಳು ₹1.5 ಸಾವಿರ ದರ ನಿಗದಿ ಮಾಡಿದ್ದರು. ಈ ವರ್ಷ ಅದು ₹3 ಸಾವಿರಕ್ಕೆ ಏರಿದೆ.

ADVERTISEMENT

‘ನಿರೀಕ್ಷೆಯಂತೆ ಮಳೆಯೇನಾದರೂ ಸುರಿದರೆ, ಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಈ ದರ ಇನ್ನಷ್ಟು ಹೆಚ್ಚಾಗುತ್ತದೆ’ ಎನ್ನುತ್ತಾರೆ ತಾಲ್ಲೂಕಿನ ಭೈರಾಪುರದ ರೈತ ಈರಪ್ಪಯ್ಯ.

‘ಸಸಿಮಡಿಗೆ ₹3.5 ಸಾವಿರ, ಕೂಲಿಯಾಳುಗಳಿಗೆ ₹3.5 ಸಾವಿರ ಸೇರಿ ಪ್ರತಿ ಎಕರೆಗೆ ಕನಿಷ್ಠ ₹7 ಸಾವಿರ ಬಿತ್ತನೆ ಖರ್ಚು ತಗುಲುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ವಿಳಂಬವೂ ಆಯಿತು: ‘ಹಿಂದಿನ ವರ್ಷ ಆಗಸ್ಟ್‌ 20ರ ಹೊತ್ತಿಗೆ ಭತ್ತದ ಬೆಳೆಗೆ ಎರಡನೇ ಬಾರಿಗೆ ಗೊಬ್ಬರ ಹಾಕಿದ್ದೆವು. ಆದರೆ ಈ ವರ್ಷ ಇನ್ನೂ ಈಗ ನಾಟಿ ಮಾಡುತ್ತಿದ್ದೇವೆ. ಇಪ್ಪತ್ತು ದಿನ ತಡವಾಗಿ ಬಿತ್ತನೆ ಕಾರ್ಯ ಆರಂಭವಾಗಿದೆ. ತೆನೆ ಬಂದ ಮೇಲೆ ಮಳೆ ಬಂದರೆ ಮಾಡಿದ್ದೆಲ್ಲವೂ ವ್ಯರ್ಥವಾಗುತ್ತದೆ’ ಎಂದು ಅದೇ ಗ್ರಾಮದ ರೈತ ಮುತ್ತಯ್ಯ ಆತಂಕ ವ್ಯಕ್ತಪಡಿಸಿದರು.

ಸಿರುಗುಪ್ಪ ರಸ್ತೆ ಬದಿಯಲ್ಲೇ 40 ಎಕರೆ ಜಮೀನಿನಲ್ಲಿ ಅವರು ಕೂಲಿಯಾಳುಗಳ ನೆರವಿನೊಂದಿಗೆ ಭತ್ತದ ಸಸಿಮಡಿಗಳನ್ನು ನಾಟಿ ಮಾಡುತ್ತಿದ್ದರು. ‘ಕಾಲುವೆಗೆ ನೀರು ಬಂದಿದ್ದರಿಂದ ನಾಲ್ಕುದಿನದಿಂದ ಮನೆಗೇ ಹೋಗಿಲ್ಲ. ನಿದ್ದೆಯನ್ನೂ ಮಾಡಿಲ್ಲ’ ಎಂದು ಹೇಳಿದರು. ಅವರ ಮುಖದಲ್ಲಿ ಅವಿರತ ದುಡಿಮೆಯ ಬೆವರ ಹನಿ ಹೊಳೆಯುತ್ತಿತ್ತು.

ಸಸಿಮಡಿ ಬೆಳೆದವರು ವಿರಳ:ಕೊಳವೆಬಾವಿ ನೀರಿನಲ್ಲಿ ಸಸಿಮಡಿಗಳನ್ನು ಬೆಳೆದವರ ಸಂಖ್ಯೆಯೂ ಕಡಿಮೆ ಇರುವುದರಿಂದ, ಬೇಡಿಕೆಗೆ ತಕ್ಕಂತೆ ಸಸಿಮಡಿ ದೊರಕದ ಸನ್ನಿವೇಶವೂ ನಿರ್ಮಾಣವಾಗುವ ಸಾಧ್ಯತೆ ಇದೆ. ಜಮೀನಿನ ಕೊಂಚ ಭಾಗದಲ್ಲಿ ಸಸಿಮಡಿಗಳನ್ನು ಬೆಳೆಸಿಕೊಳ್ಳುತ್ತಿದ್ದ ರೈತರೂ ಈ ಬಾರಿ ಸುಮ್ಮನಾಗಿದ್ದಾರೆ.
ನದಿಪಾತ್ರದಲ್ಲಿರುವ ನಿಟ್ಟೂರು, ಯರಕಲ್ಲು, ಎಂ.ಸೂಗೂರು ಗ್ರಾಮದಲ್ಲೇ ಹೆಚ್ಚು ಸಸಿಮಡಿಗಳನ್ನು ಬೆಳೆಯಲಾಗುತ್ತಿತ್ತು. ನೀರು ಹೆಚ್ಚಾಗಿ ಹರಿದ ಪರಿಣಾಮ ಅಲ್ಲಿಯೂ ಸಸಿಮಡಿಗಳು ನಷ್ಟ ಹೊಂದಿರುವುದರಿಂದ ಈ ಬಾರಿ ಭತ್ತದ ಬೆಳೆಗಾರರಿಗೆ ಸಸಿಮಡಿಗಳ ಕೊರತೆ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.