ಬೆಂಗಳೂರು: ‘ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆ ಬಳಿ ಕಾವೇರಿ ಪ್ರತಿಮೆ ಸ್ಥಾಪನೆಗೆ ಮಾತ್ರ ಟೆಂಡರ್ ನೀಡಿದ್ದು ಪ್ರತಿಮೆ ಸ್ಥಾಪನೆಗೆ ಈಗಾಗಲೇ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.
‘ಗಂಗಾ ಆರತಿ’ ಮಾದರಿಯಲ್ಲಿ ‘ಕಾವೇರಿ ಆರತಿ’ ಆಯೋಜಿಸುವ ರಾಜ್ಯ ಸರ್ಕಾರದ ತೀರ್ಮಾನ ಪ್ರಶ್ನಿಸಿ ರೈತ ಸಂಘದ ನಾಯಕಿ ಮಂಡ್ಯ ಜಿಲ್ಲೆಯ ಸುನಂದಾ ಜಯರಾಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಶಿವಪ್ರಕಾಶ್, ‘ಕೆಆರ್‌ಎಸ್ ಬಳಿ 120 ಅಡಿ ಎತ್ತರದ ಕಾವೇರಿ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಈ ಕುರಿತಂತೆ ನಡೆಯುತ್ತಿರುವ ಕಾಮಗಾರಿ ಚಟುವಟಿಕೆಗಳ ಫೋಟೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ‘ಕಾವೇರಿ ಪ್ರತಿಮೆಗೆ ಮಾತ್ರವೇ ಟೆಂಡರ್ ನೀಡಲಾಗಿದೆ. ಮನರಂಜನಾ ಪಾರ್ಕ್‌ಗೆ ಇನ್ನೂ ಟೆಂಡರ್ ಪೂರ್ಣಗೊಂಡಿಲ್ಲ’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾಮಗಾರಿ ಚಟುವಟಿಕೆ ನಡೆಸುವ ಮೂಲಕ ನೆಲ ಅಗೆಯುವುದರಿಂದ ಜಲಾಶಯಕ್ಕೆ ಹಾನಿಯಾಗುವುದಿಲ್ಲವೇ? ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಞರ ಸಲಹೆ ಪಾಲನೆ ಮಾಡಲಾಗಿದೆಯೇ? ಜಲಾಶಯ ಸುರಕ್ಷಾ ಸಮಿತಿಯ ಅನುಮತಿಯನ್ನು ಏಕೆ ಪಡೆದಿಲ್ಲ ಎಂಬ ಅಂಶಗಳ ಬಗ್ಗೆ ಎರಡು ವಾರಗಳಲ್ಲಿ ಪ್ರಮಾಣ ಪತ್ರ ಸಲ್ಲಿಸಿ’ ಎಂದು ರಾಜ್ಯ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನಿರ್ದೇಶಿಸಿತು.
ಅಂತೆಯೇ, ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಪ್ರಾಧಿಕಾರದ ಅಧ್ಯಕ್ಷ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾವೇರಿ ನೀರಾವರಿ ನಿಗಮದ ಎಂ.ಡಿ, ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಮತ್ತೊಂದು ಪಿಐಎಲ್: ಕೆಆರ್‌ಎಸ್ ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದ 198 ಎಕರೆ ಕೃಷಿ ಜಮೀನು ವಶಪಡಿಸಿಕೊಂಡು, ಅಲ್ಲಿ ₹2,615 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್ (ಮನರಂಜನೆ ಉದ್ಯಾನ) ನಿರ್ಮಿಸುವ ಉದ್ದೇಶದಿಂದ ಕರೆಯಲಾಗಿರುವ ಟೆಂಡರ್ ಪ್ರಶ್ನಿಸಿ ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಕೃಷಿಕ ಕೆ.ಬೋರಯ್ಯ ಸೇರಿದಂತೆ ಒಟ್ಟು ಐವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಗೆ ಸಂಬಂಧಿಸಿದಂತೆ ಇದೇ ನ್ಯಾಯಪೀಠ ಈಗಾಗಲೇ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಈ ಎರಡೂ ಪ್ರತ್ಯೇಕ ಪ್ರಕರಣಗಳನ್ನು ಒಟ್ಟಿಗೇ ಕೈಗೆತ್ತಿಕೊಂಡಿರುವ ನ್ಯಾಯಪೀಠ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.