ADVERTISEMENT

ಆರೋಗ್ಯ ಸುಧಾರಣೆ, ಶಿಕ್ಷಣಕ್ಕೆ ಒತ್ತು: ಮೋದಿ

₹1 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:09 IST
Last Updated 6 ಮಾರ್ಚ್ 2019, 19:09 IST
   

ಕಲಬುರ್ಗಿ: ‘ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ಸಂಜೀವಿನಿಯಂತಾಗಿದೆ. ದೇಶದಲ್ಲಿ ನಿತ್ಯ 10 ಸಾವಿರಕ್ಕಿಂತ ಹೆಚ್ಚು ಕಡುಬಡವರು ಉಚಿತ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಜ್ಯದ ವಿವಿಧೆಡೆ ₹1 ಸಾವಿರ ಕೋಟಿ ಮೊತ್ತದ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಲ್ಲಿಂದಲೇ ಚಾಲನೆ ನೀಡಿ, ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ನಂತರ ಅವರು ಮಾತನಾಡಿದರು.

‘ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆಗೆ ಹಣ ಇಲ್ಲದೇ ಸಾವಿನ ನಿರೀಕ್ಷೆಯಲ್ಲಿದ್ದೆವು. ಈ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಾಗಿದ್ದರಿಂದ ಪುನರ್ಜನ್ಮ ಸಿಕ್ಕಂತಾಗಿದೆ ಎಂದು ಫಲಾನುಭವಿಗಳು ಸಂವಾದದಲ್ಲಿ ಕೃತಜ್ಞತೆ ಸಲ್ಲಿಸಿದರು’ ಎಂದರು.

ADVERTISEMENT

‘ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಎಂಟು ಸೂಪರ್‌ ಸ್ಪೆಷಾಲಿಟಿ ವಿಭಾಗಗಳನ್ನು ಒಳಗೊಂಡ 200 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಿದ್ದೇವೆ. ಬೆಂಗಳೂರಿನ ರಾಜಾಜಿನಗರದ ಇಎಸ್‌ಐಸಿ ವೈದ್ಯಕೀಯ ಕಾಲೇಜನ್ನು ಪೂರ್ಣಗೊಳಿಸಿ ಸೇವೆಗೆ ಸಮರ್ಪಿಸಿದ್ದೇವೆ. ಈ ಎರಡೂ ಆಸ್ಪತ್ರೆಗಳುಕರ್ನಾಟಕದಲ್ಲಿ ಆರೋಗ್ಯ ಸೇವೆ ಸುಧಾರಣೆಗೆ ಸಹಕಾರಿಯಾಗಲಿದ್ದು,ಕರ್ನಾಟಕದವರಿಗೆ ವರ್ಷಕ್ಕೆ 100 ವೈದ್ಯಕೀಯ ಹಾಗೂ 55 ವೈದ್ಯಕೀಯ ಸ್ನಾತಕೋತ್ತರ ಸೀಟುಗಳೂ ಹೆಚ್ಚಿಗೆ ಲಭ್ಯವಾಗಲಿವೆ’ ಎಂದು ಹೇಳಿದರು.

‘ದೇಶದಲ್ಲಿ ಆರು ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳಿವೆ. ಅದರಲ್ಲಿ ಬೆಂಗಳೂರಿನ ಈ ಕಾಲೇಜೂ ಒಂದು. ಇದಕ್ಕೆ 2009ರಲ್ಲಿ ಚಾಲನೆ ನೀಡಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. ಹಿಂದಿನ ಸರ್ಕಾರ ಆರೋಗ್ಯ ಕ್ಷೇತ್ರದ ಬಗ್ಗೆ ಎಷ್ಟೊಂದು ಕಾಳಜಿ ಹೊಂದಿತ್ತು ಎಂಬುದಕ್ಕೆ ಇದೇ ನಿದರ್ಶನ’ ಎಂದು ಟೀಕಿಸಿದರು.

‘ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಕರ್ನಾಟಕ ಈಶಾನ್ಯ ಭಾಗದ ಡಿಪೊ ರಾಯಚೂರಿನಲ್ಲಿ ಕೇವಲ ಎರಡೂವರೆ ಎಕರೆಯಲ್ಲಿದೆ. ₹206 ಕೋಟಿ ವೆಚ್ಚದಲ್ಲಿ ಕಲಬುರ್ಗಿಯಲ್ಲಿ 56 ಎಕರೆ ಪ್ರದೇಶದಲ್ಲಿ ಡಿಪೊಸ್ಥಾಪಿಸುತ್ತಿದ್ದು, ಅದು2020ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದರು.

ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದ ಪೀಠಗಳಿಗೆ ಬೆಂಗಳೂರಿನಲ್ಲಿ ₹19 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಶಾನ್ಯ ಭಾರತದ ವಿದ್ಯಾರ್ಥಿನಿಯರಿಗೆ ₹13.85 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿ ನಿಲಯವನ್ನು ಮೋದಿ ಉದ್ಘಾಟಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮುಖ್ಯಮಂತ್ರಿ ಪರವಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇದ್ದರು.

ಮುಖ್ಯಮಂತ್ರಿ ಹೇಗಿದ್ದಾರೆ?

‘ಮುಖ್ಯಮಂತ್ರಿ ಹೇಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿದ್ದ ಸಚಿವ ರಾಜಶೇಖರ ಪಾಟೀಲ ಅವರನ್ನು ಎಲ್ಲರಿಗೂ ಕೇಳುವಂತೆಯೇ ಪ್ರಶ್ನಿಸಿದರು.

‘ಚೆನ್ನಾಗಿದ್ದಾರೆ ಸರ್‌’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.