ಬೆಂಗಳೂರು: ‘ಪೋಕ್ಸೊದಂತಹ ಅಹಿತಕರ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವುದಕ್ಕೂ ಮುನ್ನ ತಮ್ಮ ಕೆಲಸಗಳ ಬಗ್ಗೆ ಅರಿವಿರಬೇಕಿತ್ತು’ ಎಂದು ಹೈಕೋರ್ಟ್, ಪ್ರಕರಣದ ಆರೋಪಿಯೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ನಿರೀಕ್ಷಣಾ ಜಾಮೀನಿನ ಷರತ್ತುಗಳ ಸಡಿಲಿಕೆ ಮತ್ತು ಕೆಲವು ಕಾನೂನು ಅಂಶಗಳ ಸ್ಪಷ್ಟನೆ ಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರು ಸೋಮವಾರ ವಿಚಾರಣೆ ನಡೆಸಿದರು.
‘ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಅವರು ಆಗಾಗ್ಗೆ ರಾಜ್ಯ ಮತ್ತು ದೇಶದಾದ್ಯಂತ ಪ್ರವಾಸ ಕೈಗೊಳ್ಳುವ ಪ್ರಮೇಯಗಳಿರುತ್ತವೆ. ಹೀಗಾಗಿ, ಪ್ರತಿ ಹಂತದಲ್ಲೂ ಅನುಮತಿ ಕೋರಿ ವಿಚಾರಣಾ ನ್ಯಾಯಾಲಯವನ್ನು ಎಡತಾಕಲು ಅವರಿಗೆ ಕಷ್ಟವಾಗುತ್ತದೆ’ ಎಂದು ಯಡಿಯೂರಪ್ಪ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್ ಹೇಳಿದರು.
ಈ ಮಾತಿಗೆ ನ್ಯಾಯಪೀಠ, ‘ಇಂತಹ ಅಹಿತಕರ ಘಟನೆಗಳಲ್ಲಿ ಭಾಗಿಯಾಗುವುದಕ್ಕೂ ಮುನ್ನ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಅರಿವಿರಬೇಕಿತ್ತಲ್ಲವೇ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ‘ಹಿರಿಯ ರಾಜಕೀಯ ನಾಯಕರು ಇಂತಹವುಗಳನ್ನೆಲ್ಲಾ ಮೀರಿ ನಡೆದುಕೊಳ್ಳಬೇಕು’ ಎಂದು ಮೌಖಿಕವಾಗಿ ನುಡಿಯಿತು.
ಇದಕ್ಕೆ ಪ್ರತಿಕ್ರಿಯಿಸಿದ ನಾಗೇಶ್, ‘ಆರೋಪದಲ್ಲಿ ಸ್ವಲ್ಪವಾದರೂ ಹುರುಳಿರಬೇಕು. ಆದರೆ, ಯಡಿಯೂರಪ್ಪ ವಿರುದ್ಧ ಮಾಡಲಾಗಿರುವ ಈ ಆರೋಪ ಸುಳ್ಳು’ ಎಂದು ಸಮಜಾಯಿಷಿ ನೀಡಲು ಮುಂದಾದರು.
ಆಗ ಪೀಠವು, ‘ಅರ್ಜಿದಾರರ ಪ್ರವಾಸ ನಿರ್ಬಂಧದಲ್ಲಿ ಸಡಿಲಿಕೆ ಮಾಡಬಹುದೇ ಎಂಬುದನ್ನು ಪರಿಶೀಲಿಸಿ’ ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್ ಅವರಿಗೆ ಸೂಚಿಸಿ, ‘ಯಡಿಯೂರಪ್ಪ ಅವರಿಗೆ ವಿಧಿಸಲಾಗಿರುವ ಪ್ರವಾಸ ನಿರ್ಬಂಧ ಮುಂದುವರಿಯಲಿದೆ’ ಎಂದು ವಿಚಾರಣೆ ಮುಂದೂಡಿತು.
‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012 (ಪೋಕ್ಸೊ) ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿರುವುದನ್ನು ರದ್ದುಪಡಿಸಬೇಕು. ಸಂಜ್ಞೇಯ ಅಪರಾಧದ ಬಗ್ಗೆ ಹೊಸದಾಗಿ ಪರಿಗಣಿಸುವಂತೆ ಹೊರಡಿಸಲಾಗಿದ್ದ ಆದೇಶದಲ್ಲಿ ಕೆಲವೊಂದು ಕಾನೂನು ಅಂಶಗಳನ್ನು ಸ್ಪಷ್ಟಪಡಿಸಬೇಕು’ ಎಂದು ಯಡಿಯೂರಪ್ಪ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.