ADVERTISEMENT

ಡಿಪಿಎಆರ್‌ ಮಾರ್ಗಸೂಚಿಗೆ ವಿರೋಧ: ಬಡ್ತಿ ಮೀಸಲಾತಿ ಕಗ್ಗಂಟು

ಡಿಸಿಎಂ ಸಭೆ ಇಂದು

ರಾಜೇಶ್ ರೈ ಚಟ್ಲ
Published 5 ಫೆಬ್ರುವರಿ 2019, 20:00 IST
Last Updated 5 ಫೆಬ್ರುವರಿ 2019, 20:00 IST
   

ಬೆಂಗಳೂರು: ಹಿಂಬಡ್ತಿಗೆ ಗುರಿಯಾಗಿರುವ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌.ಟಿ) ನೌಕರರಿಗೆ ಸೂಪರ್‌ ನ್ಯೂಮರರಿ ಹುದ್ದೆ ಸೃಷ್ಟಿಸಿ ನ್ಯಾಯ ಕೊಡಿಸಲು ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆ ರೂಪಿಸಿ ಸಂಪುಟ ಸಭೆ ಒಪ್ಪಿಗೆ ನೀಡಿದೆಯೇನೊ ನಿಜ. ಆದರೆ ಕಾಯ್ದೆ ಅನುಷ್ಠಾನಗೊಳಿಸುವುದು ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸಿದ್ಧಪಡಿಸಿದ ಮಾರ್ಗಸೂಚಿಯ ಅನ್ವಯ ಆದೇಶ ಹೊರಡಿಸಲು ಅಡ್ವೊಕೇಟ್‌ ಜನರಲ್‌ (ಎ.ಜಿ) ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಹಮತ ಸೂಚಿಸಿದ್ದಾರೆ. ಆದರೆ, ಈ ಮಾರ್ಗಸೂಚಿಗೆ ರಾಜ್ಯ ಎಸ್‌.ಸಿ, ಎಸ್‌.ಟಿ ಸರ್ಕಾರಿ ನೌಕರರು ತೀವ್ರ ವಿರೋಧ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಈ ಮಧ್ಯೆ, ಸುತ್ತೋಲೆ ಹೊರಡಿಸುವುದಕ್ಕೆ ತಡೆ ನೀಡಿರುವ ಕಾನೂನು ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಈ ಬಗ್ಗೆ ಸಮಾಲೋಚನೆ ನಡೆಸಲು 6ರಂದು (ಬುಧವಾರ) ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಡಿಪಿಎಆರ್‌ ಕಾರ್ಯದರ್ಶಿ, ಎ.ಜಿ ಮತ್ತು ಎಸ್‌.ಸಿ, ಎಸ್‌.ಟಿ ಸರ್ಕಾರಿ ನೌಕರ ಸಮನ್ವಯ ಸಮಿತಿಯ ಪದಾಧಿಕಾರಿಗಳ ಸಭೆ ಕರೆದಿದ್ದಾರೆ.

ADVERTISEMENT

ಕಾಯ್ದೆಯಲ್ಲಿರುವ ಅಂಶಗಳನ್ನು ಪರಿಗಣಿಸಿ, ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ‘ಬಡ್ತಿ ಮೀಸಲು ಕಾಯ್ದೆ –2002’ ಅನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ 2017ರ ಫೆ. 9ರಂದು ನೀಡಿದ್ದ ತೀರ್ಪಿನ ಅನ್ವಯ ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಲಾಗಿದ್ದು, ಅದರ ಪ್ರಕಾರ 3,900ಕ್ಕೂ ಹೆಚ್ಚು ಅಧಿಕಾರಿಗಳು ಹಿಂಬಡ್ತಿಗೆ ಒಳಗಾಗಿದ್ದಾರೆ. ಹಿಂಬಡ್ತಿಗೆ ಒಳಗಾದವರಿಗೆ ರಕ್ಷಣೆ ನೀಡಲು ಹೊಸ ಕಾಯ್ದೆ ರೂಪಿಸಲಾಗಿದೆ. ಈ ಕಾಯ್ದೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಮತ್ತೆ ಪರಿಷ್ಕರಿಸಬೇಕಾಗಿದೆ. ಅದನ್ನು ಆಧಾರವಾಗಿಟ್ಟು, ಹಿಂಬಡ್ತಿಗೆ ಒಳಗಾದವರು ಯಾವ ಕೇಡರ್‌ನಲ್ಲಿ ಬರುತ್ತಾರೆ ಎಂದು ನೋಡಿಕೊಂಡು ಮುಂಬಡ್ತಿ ನೀಡಬೇಕಿದೆ. ಈ ಪ್ರಕ್ರಿಯೆಗೆ ಕನಿಷ್ಠ 15 ದಿನ ಬೇಕಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಬಡ್ತಿ ಮೀಸಲು ಕುರಿತಂತೆ ಬಿ.ಕೆ. ಪವಿತ್ರ ‍ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೂ ಮೊದಲು ಇದ್ದ ಹುದ್ದೆಯಲ್ಲೇ ಹಿಂಬಡ್ತಿಗೊಂಡವರನ್ನು ಮುಂದುವರಿಸಬೇಕು ಎಂದು ಎಸ್‌.ಸಿ, ಎಸ್‌.ಟಿ ಸರ್ಕಾರಿ ನೌಕರ ಸಮಿತಿ ಪಟ್ಟು ಹಿಡಿದಿದೆ. ‘1978ರ ನಂತರ ಈಗಾಗಲೇ ನೀಡಿರುವ ತತ್ಪರಿಣಾಮ ಜ್ಯೇಷ್ಠತೆ ಸಿಂಧು ಆಗಿರಬೇಕು ಮತ್ತು ಅದನ್ನು ಸಂರಕ್ಷಿಸಬೇಕು’ ಎಂದು ಕಾಯ್ದೆಯಲ್ಲಿದೆ. ಆದರೆ, ಮಾರ್ಗಸೂಚಿ ಸಿದ್ಧಪಡಿಸುವಾಗ ಈ ಅಂಶವನ್ನು ಡಿಪಿಎಆರ್‌ ಉಲ್ಲಂಘಿಸಿದೆ ಎನ್ನುವುದು ಸಮಿತಿಯ ವಾದ.

ಆದರೆ, ಅದೇ ಕಾಯ್ದೆಯಲ್ಲಿ ನೇಮಕಾತಿ ಪ್ರಾಧಿಕಾರಗಳು ಬಡ್ತಿಯನ್ನು ಕ್ರಮಬದ್ಧವಾಗಿ ನೀಡಲಾಗಿದೆಯೇ ಎಂದು ಖಚಿತ‍ಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಜ್ಯೇಷ್ಠತಾ ಪಟ್ಟಿಯನ್ನು ಪುನರ್‌ ಅವಲೋಕಿಸಬೇಕು ಮತ್ತು ಪುನರ್‌ರಚಿಸಬೇಕು ಎಂದಿದೆ. ಈ ಅಂಶವನ್ನು ಪರಿಗಣಿಸಿರುವ ಡಿಪಿಎಆರ್‌, ಹೊಸ ಜ್ಯೇಷ್ಠತಾ ಪಟ್ಟಿಯನ್ನು ಹೇಗೆ ಪುನರ್‌ರಚಿಸಬೇಕು ಮತ್ತು ಆ ಪಟ್ಟಿಯ ಪ್ರಕಾರ ಜ್ಯೇಷ್ಠತೆ ಪಡೆಯುವವರು ಯಾವ ಹುದ್ದೆಗೆ ಬಡ್ತಿ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಬೇಕುಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾಯ್ದೆ ಜಾರಿಗೊಳಸಲೇಬೇಕೆಂದು ಎಸ್‌.ಸಿ, ಎಸ್‌.ಟಿ ಸರ್ಕಾರಿ ನೌಕರರ ಪಟ್ಟು ಹಿಡಿದಿದ್ದಲ್ಲದೆ, ಅದಕ್ಕೆ ಪರಮೇಶ್ವರ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಇದೇ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಕಾಯ್ದೆ ತಕ್ಷಣ ಜಾರಿಗೊಳಿಸಿ ಹಿಂಬಡ್ತಿ ಹೊಂದಿರುವ ನೌಕರರನ್ನು ಅದೇ ಹುದ್ದೆಯಲ್ಲಿ ಮರುನೇಮಿಸುವಂತೆ ಆಗ್ರಹಿಸಿ ಎಸ್‌.ಸಿ, ಎಸ್‌.ಟಿ ನೌಕರರು ಡಿಪಿಎಆರ್‌ ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಿ.ಎಸ್‌ಗೆ ದೂರು ನೀಡಲು ಚಿಂತನೆ

ಕಾಯ್ದೆ ಜಾರಿಗೆ ಒತ್ತಾಯಿಸಿ ಒತ್ತಡ ಹೇರುವ ಜೊತೆಗೆ ಕೆಲವು ಪರಿಶಿಷ್ಟ ನೌಕರರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿಗೆ (ಸಿ.ಎಸ್‌) ದೂರು ನೀಡಲು ಡಿಪಿಎಆರ್‌ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ‘ಕಾನೂನು ಅನ್ವಯ, ಸರ್ಕಾರದ ಆದೇಶ ಪಾಲಿಸುವುದಷ್ಟೆ ನಮ್ಮ ಕೆಲಸ. ಕಾಯ್ದೆ ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಕೆಲವರು ಬಾಯಿಗೆ ಬಂದಂತೆ ಮಾತನಾಡಿ, ಕಿರುಕುಳ ನೀಡುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

* ಹಿಂಬಡ್ತಿಗೊಂಡವರನ್ನು ಮರುನೇಮಿಸುವ ಬದಲು, ಮಾರ್ಗಸೂಚಿ ಹೆಸರಿನಲ್ಲಿ ದ್ರೋಹ ಮಾಡುತ್ತಿರುವ ಸಿ.ಎಸ್‌ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುತ್ತೇವೆ

-ಡಿ. ಚಂದ್ರಶೇಖರಯ್ಯ, ಕಾನೂನು ಸಲಹೆಗಾರ, ಪರಿಶಿಷ್ಟ ನೌಕರರ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.