ADVERTISEMENT

ರೈತರಿಗೆ ನ್ಯಾಯ ಕೊಡದ ಖಾಸಗಿ ವಿಮಾ ಕಂಪನಿಗಳು: ಕ್ರಮಕ್ಕೆ ಬಿ.ಸಿ. ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 19:26 IST
Last Updated 21 ಜನವರಿ 2022, 19:26 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ಬೆಂಗಳೂರು: ‘ಖಾಸಗಿ ವಿಮಾ ಕಂಪನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆನಷ್ಟದ ವಿಮಾ ಹಣ ತಲುಪಿಸುತ್ತಿಲ್ಲ. ಕೇವಲ ಅಂಕಿ ಸಂಖ್ಯೆಗಳನ್ನಷ್ಟೇ ಅಧಿಕಾರಿಗಳಿಗೆ ತೋರಿಸುತ್ತಿವೆ. ಇಂತಹ ಕಂಪನಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ನಡೆದ ಸಭೆಯಲ್ಲಿ, ಖಾಸಗಿ ವಿಮಾ ಕಂಪನಿಗಳ ಧೋರಣೆ ಬಗ್ಗೆ ಪಾಟೀಲ ಕಿಡಿ ಕಾರಿದರು.

ಅಂಕಿಸಂಖ್ಯೆಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸರ್ಕಾರಿ ವಿಮಾ ಕಂಪನಿಗಳು ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿವೆ. ಖಾಸಗಿ ಕಂಪನಿಗಳಿಗೆಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಪಾಟೀಲ,‌ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪನಿಗಳ ಕಚೇರಿ ತೆರೆಯಬೇಕೆಂದು ಹಿಂದೆಯೇ ಸೂಚಿಸಿದ್ದರೂ ಅದು ಜಾರಿಯಾಗಿಲ್ಲ. ಹದಿನೈದು ದಿನದೊಳಗೆ ಎಲ್ಲ ಖಾಸಗಿ ವಿಮಾ ಕಂಪನಿಗಳ ಪ್ರತಿನಿಧಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ADVERTISEMENT

‘ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಅಥವಾ ರಸಗೊಬ್ಬರದ ವಿಚಾರದಲ್ಲಾಗಲಿ ರಾಜೀ ಬೇಕಾಗಿಲ್ಲ. ಯಾವ ಮುಲಾಜೂ ಇಟ್ಟುಕೊಳ್ಳಬೇಡಿ’ ಎಂದು ಭಗವಂತ ಖೂಬಾ ಅಧಿಕಾರಿಗಳಿಗೆ ಸೂಚಿಸಿದರು.

ರೈತರ ಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯ ಇರಬೇಕು. ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆ ಅಂಕಿಅಂಶಗಳ ಜತೆ ಪರಿಶೀಲನೆ ಮಾಡಿ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಕೃಷಿ ಆಯುಕ್ತರಿಗೆ ಖೂಬಾ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.