ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ತನಿಖಾ ಪ್ರಗತಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 20:06 IST
Last Updated 7 ಜುಲೈ 2022, 20:06 IST

ಬೆಂಗಳೂರು: ‘ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲೂ ಟೂತ್ ಬಳಕೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ತಿದ್ದುಪಡಿ ಮಾಡಿರುವ ಒಎಂಆರ್ ಶೀಟ್ ಪ್ರತಿಗಳನ್ನು ಸಲ್ಲಿಸಿ’ ಎಂದು ಹೈಕೋರ್ಟ್ ಸಿಐಡಿಗೆ ನಿರ್ದೇಶಿಸಿದೆ.

ಪ್ರಕರಣದ ಆರೋಪಿ ಸಿ.ಎನ್.ಶಶಿಧರ್ ಮತ್ತಿತರರು ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಬಂಧನ ಸೇರಿದಂತೆ ತನಿಖೆಯ ಪ್ರಗತಿಯ ಕುರಿತಂತೆ ತಾಜಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಲಾಯಿತು.

ADVERTISEMENT

ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ತಿದ್ದುಪಡಿ ಮಾಡಲಾದ ಒಎಂಆರ್ ಶೀಟ್‌ಗಳ ಮೂಲ ಪ್ರತಿಯನ್ನು ಸಲ್ಲಿಸಿದ್ದೀರಿ, ಅವು ಬೇಡ, ತನಿಖಾಧಿಕಾರಿಯ ಬಳಿಯೇ ಇರಲಿ. ನಮಗೆ ನಕಲು ಪ್ರತಿಗಳನ್ನು ಸಲ್ಲಿಸಿ’ ಎಂದು ಸೂಚಿಸಿತು.

‘ಬ್ಲೂಟೂತ್ ಸೇರಿದಂತೆ ಯಾವ್ಯಾವ ಅಕ್ರಮ ವಿಧಾನಗಳನ್ನು ಅನುಸರಿಸಲಾಗಿದೆ ಎಂಬ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು. ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂದೇಶ್, ‘ಕೋರ್ಟ್ ಆದೇಶವನ್ನು ಹೊರಗಿನವರು ಲಾಭಕ್ಕೆ ಬಳಸಿಕೊಂಡರೆ ನಾನೇನು ಮಾಡಲಿ? ಕೋರ್ಟ್ ಹೊರಗಿನ ವಿಚಾರದ ಬಗ್ಗೆ ನಾನೇನೂ ಮಾಡಲಾಗುವುದಿಲ್ಲ. ಕೋರ್ಟ್ ಮುಂದಿರುವ ವಿಷಯವನ್ನಷ್ಟೇ ಪರಿಶೀಲಿಸುತ್ತೇನೆ’ ಎಂದರು.

‘ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವುದು ಕೋರ್ಟ್ ಉದ್ದೇಶ. ಆ ನಿಟ್ಟಿನಲ್ಲಿ ಕೋರ್ಟ್ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.