ADVERTISEMENT

ಪಿಟಿಸಿಎಲ್‌: ಮೇಲ್ಮನವಿದಾರರಿಗೆ ₹25 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಹಕ್ಕು ಪುನರ್‌ಸ್ಥಾಪನೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:36 IST
Last Updated 10 ಏಪ್ರಿಲ್ 2025, 15:36 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಪರಿಶಿಷ್ಟ ಜಾತಿಯ (ಎಸ್‌ಸಿ) ವ್ಯಕ್ತಿಗೆ ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮತ್ತೊಬ್ಬರಿಗೆ ನೋಂದಣಿ ಮಾಡಿಕೊಟ್ಟ ಸಂಗತಿಯನ್ನು ಮರೆಮಾಚಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನುಗಳ ಪರಭಾರೆ ನಿಷೇಧ (‍‍‍ಪಿಟಿಸಿಎಲ್‌) ಕಾಯ್ದೆ–1978ರ ಅಡಿಯಲ್ಲಿ, ಜಮೀನಿನ ಹಕ್ಕು ಪುನರ್‌ ಸ್ಥಾಪಿಸಲು ನ್ಯಾಯಾಲಯದ ಮೆಟ್ಟಿಲೇರಿದ್ದ ಕುಟುಂಬಕ್ಕೆ ಹೈಕೋರ್ಟ್ ₹25 ಸಾವಿರ ದಂಡ ವಿಧಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರ ವ್ಯಾಪ್ತಿಯಲ್ಲಿ ಚಿಕ್ಕವೆಂಕಟಮ್ಮ ಅವರಿಗೆ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಇದನ್ನು ಅವರು ಮಾರಾಟ ಮಾಡಿದ್ದರು. ತದನಂತರ ಜಮೀನನ್ನು ಪುನಃ ಪಡೆಯಲು ಕಾನೂನು ಹೋರಾಟ ನಡೆಸಿದ್ದ ಚಿಕ್ಕವೆಂಕಟಮ್ಮ ಕುಟುಂಬದ ವಾರಸುದಾರರು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ದಂಡದ ಮೊತ್ತವನ್ನು ಆರು ವಾರಗಳಲ್ಲಿ, ‘ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿ’ಗೆ ಪಾವತಿ ಮಾಡಬೇಕು. ತಪ್ಪಿದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಈ ಮೊತ್ತವನ್ನು ಮೇಲ್ಮನವಿದಾರರಿಂದ ವಸೂಲಿ ಮಾಡಬೇಕು’ ಎಂದು ನಿರ್ದೇಶಿಸಿದೆ.

ADVERTISEMENT

‘ಪಿಟಿಸಿಎಲ್ ಕಾಯ್ದೆಯನ್ನು ಸಾಮಾಜಿಕ ಮತ್ತು ಅರ್ಥಿಕ ತುಳಿತಕ್ಕೆ ಒಳಗಾದವರ ನೆರವಿಗಾಗಿ ಅನುಷ್ಠಾನೊಳಿಸಲಾಗಿದೆ. ಈ ಕಾಯ್ದೆಯಡಿ ಮಂಜೂರಾದ ಜಮೀನನ್ನು ಪರಭಾರೆ ಮಾಡುವುದಕ್ಕೆ ನಿಷೇಧವಿದೆ. ಆದರೂ, ಶ್ರೀಮಂತರು ಹಾಗೂ ಪ್ರಬಲರು ಇಂತಹ ಜಮೀನಗಳನ್ನು ಪಡೆಯಲು ಅನುದಾನಿತರ ಬಡತನ ಮತ್ತು ಅನಕ್ಷರತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ನ್ಯಾಯಪೀಠ ವಿಷಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.