ADVERTISEMENT

ಮಳೆ ಕೊರತೆ–ಎಲ್ಲೆಡೆ ಹೆಚ್ಚಿದ ಆತಂಕ| ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 18:40 IST
Last Updated 20 ಜೂನ್ 2019, 18:40 IST
   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗಿ ಕಾಲಿಟ್ಟಿದ್ದರೂ, ಇನ್ನೂ ಬಿರುಸು ಪಡೆದುಕೊಂಡಿಲ್ಲ. ಹಲವೆಡೆ ನೀರಿನ ಒರತೆ ಆಗದ ಕಾರಣ ಮಳೆಯನ್ನೇ ಆಶ್ರಯಿಸಿದ ಗದ್ದೆಗಳಲ್ಲಿ ಬೇಸಾಯ ಇನ್ನೂ ಆರಂಭಗೊಂಡಿಲ್ಲ.

ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶೇ 39ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ 48ರಷ್ಟು ಮಳೆ ಕೊರತೆ ಕಾಣಿಸಿದ್ದು, ಕೆಲವೇ ದಿನಗಳಲ್ಲಿ ಮಳೆ ಚುರುಕಾಗದಿದ್ದರೆ ಗಂಭೀರ ಸ್ಥಿತಿ ನಿರ್ಮಾಣವಾಗಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ಮೇಲ್ವಿಚಾರಣಾ ಘಟಕದ (ಕೆಎಸ್‌ಎನ್‌ಡಿಎಂಸಿ) ಕಿರಿಯ ವಿಜ್ಞಾನಿ ಎಸ್‌.ಎಸ್.ಎಂ.ಗವಾಸ್ಕರ್‌ ಹೇಳಿದರು.

‘ಬಂಗಾಳಕೊಲ್ಲಿಯಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಉತ್ತರಾಭಿಮುಖವಾಗಿ ಮುಂಗಾರು ಮಾರುತ ಚಲಿಸಬಹುದು. ಇದು ಮಳೆ ತರಿಸುವಲ್ಲಿ ಇದು ಬಹಳ ಮುಖ್ಯ ಪಾತ್ರ ವಹಿಸಬಹುದು’ ಎಂದರು.

ADVERTISEMENT

ಇದರ ಸೂಚನೆ ಎಂಬಂತೆ ರಾಜ್ಯದ ಕಾರವಾರ ಸಹಿತ ರಾಜ್ಯದ ಕರಾವಳಿ ಭಾಗದಲ್ಲಿ ಗುರುವಾರ ಮಳೆಯಾಗಿದೆ.

ವಿದ್ಯುತ್‌ ಕೊರತೆ: ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ವಿದ್ಯುತ್‌ ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ಜಲಾಶಯಗಳಲ್ಲಿನ ನೀರಿನ ಸಂಗ್ರಹ ಗಮನಿಸಿದರೆ ಕಳೆದ ವರ್ಷಕ್ಕಿಂತ ತುಂಬ ಕಡಿಮೆ ಇದೆ. ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಈ ವೇಳೆಗೆ ಜಲಾಶಯದ ಒಟ್ಟು ಸಾಮರ್ಥ್ಯದ ಶೇ 21.66ರಷ್ಟು ನೀರು ಸಂಗ್ರಹವಿತ್ತು. ಈ ಬಾರಿ ಅದು ಶೇ 10.02ಕ್ಕೆ ಕುಸಿದಿದೆ. ಮಾಣಿ ಜಲಾಶಯದಲ್ಲಿ ಶೇ 8.74ರಷ್ಟು (ಕಳೆದ ವರ್ಷ ಶೇ 23.71) ಹಾಗೂ ಸೂಪಾ ಜಲಾಶಯದಲ್ಲಿ ಶೇ 29.3ರಷ್ಟು (ಕಳೆದ ವರ್ಷ ಶೇ 33.11) ನೀರು ಸಂಗ್ರಹ ಮಾತ್ರ ಇದೆ. ವಾಡಿಕೆಯಂತೆ ಜೂನ್‌ ಮೊದಲ ವಾರದಿಂದಲೇ ಮಳೆ ಬಂದಿದ್ದರೆ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಹೆಚ್ಚುವ ಸಾಧ್ಯತೆ ಇತ್ತು.

ಬೇಸಿಗೆ ಕೊನೆಗೊಂಡ ಕಾರಣ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ 10 ಸಾವಿರ ಮೆಗಾವಾಟ್‌ಗೆ ಇಳಿಕೆಯಾಗಿದೆ. ಬೇಸಿಗೆಯಲ್ಲಿ ಅದು 11,500 ಮೆಗಾವಾಟ್‌ನಷ್ಟಿರುತ್ತದೆ. ಸದ್ಯ ಸೌರ ವಿದ್ಯುತ್‌, ಪವನ ವಿದ್ಯುತ್‌, ಸೀಮಿತ ಪ್ರಮಾಣದಲ್ಲಿ ಜಲವಿದ್ಯುತ್‌ ಹಾಗೂ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಮಳೆ ಬಾರದೆ ರೈತರು ಮತ್ತೆ ಪಂಪ್‌ಸೆಟ್‌ಗೆ ಮೊರೆ ಹೋದರೆ ವಿದ್ಯುತ್ ಬೇಡಿಕೆ ಹೆಚ್ಚಲಿದೆ. ಆಗ ಉಷ್ಣ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕಿದ್ದು, ಕಲ್ಲಿದ್ದಲಿಗೆ ಮೊರೆ ಹೋಗಬೇಕಾಗಬಹುದು ಎಂಬ ಆತಂಕ ಎದುರಾಗಿದೆ.

ಮಳೆ ಕೊರತೆ ಎಷ್ಟಿದೆ?
ರಾಜ್ಯದ ಮಲೆನಾಡು ಪ್ರದೇಶದಲ್ಲಿ ಜೂನ್ 1ರಿಂದ 19ರೊಳಗೆ ವಾಡಿಕೆಯಂತೆ 184 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಈ ಬಾರಿ ಸುರಿದುದು 112 ಮಿ.ಮೀ ಮಾತ್ರ. ಕರಾವಳಿ ಭಾಗದಲ್ಲಿ 431 ಮಿ.ಮೀ ಬದಲಿಗೆ 225 ಮಿ.ಮೀ ಮಳೆ ಬಂದಿದೆ. ಉತ್ತರ ಒಳನಾಡಿನಲ್ಲಿ 44 ಮಿ.ಮೀ ಬದಲಿಗೆ ಶೇ 28ರಷ್ಟು ಕಡಿಮೆ ಮುಂಗಾರು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.