ಬೆಂಗಳೂರು: ‘ರೈಲ್ವೆ ಪರೀಕ್ಷೆಯ ಸಂದರ್ಭದಲ್ಲಿ ತಾಳಿ, ಕುಂಕುಮ ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದರೂ ಬಿಜೆಪಿಯವರು ಏಕೆ ಮೌನ ವಹಿಸಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರದ್ದು ಇಬ್ಬಗೆ ನೀತಿ, ರಾಜಕಾರಣ. ಧಾರ್ಮಿಕ ಭಾವನೆಗಳನ್ನು ಇಟ್ಟುಕೊಂಡು ಅವರು ಆಟವಾಡುತ್ತಾರೆ’ ಎಂದು ದೂರಿದರು.
‘ರೈಲ್ವೆ ಪರೀಕ್ಷೆಯಲ್ಲಿ ಧಾರ್ಮಿಕ ಸಂಕೇತಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ನೀತಿಯನ್ನು ಬ್ರಾಹ್ಮಣ ಮಹಾಸಭಾ ಸೇರಿದಂತೆ ಎಲ್ಲ ಹಿಂದೂ ಧಾರ್ಮಿಕ ಸಂಘಟನೆಗಳು ಪ್ರಶ್ನಿಸಬೇಕು’ ಎಂದು ಅವರು ಒತ್ತಾಯಿಸಿದರು.
ಆರೋಪದಲ್ಲಿ ಹುರುಳಿಲ್ಲ: ‘ಟಿಸಿಎಸ್ 10ಕೆ ಓಟದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ದೂಳು, ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ಓಡಬೇಕಾಯಿತು. ನಗರದ ರಸ್ತೆಗಳು ಹಾಳಾಗಿರುವ ಪರಿಣಾಮ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಯಿತು ಎನ್ನುವ ಸಂಸದ ತೇಜಸ್ವಿ ಸೂರ್ಯ ಅವರ ಆರೋಪದಲ್ಲಿ ಹುರುಳಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.