ADVERTISEMENT

ಇಂಗ್ಲಿಷ್‌ಗೆ ರನ್ನನ ‘ಗದಾಯುದ್ಧ’

ಜೆಎನ್‌ಯು ಕನ್ನಡ ಅಧ್ಯಯನ ಪೀಠದಿಂದ ಕಾರ್ಯ; ರನ್ನ ಪ್ರತಿಷ್ಠಾನದ ನೆರವು

ವೆಂಕಟೇಶ್ ಜಿ.ಎಚ್
Published 29 ಜುಲೈ 2019, 20:21 IST
Last Updated 29 ಜುಲೈ 2019, 20:21 IST
ಇಂಗ್ಲಿಷ್‌ಗೆ ಭಾಷಾಂತರಗೊಂಡಿರುವ ‘ಗದಾಯುದ್ಧಂ’ ಕೃತಿ
ಇಂಗ್ಲಿಷ್‌ಗೆ ಭಾಷಾಂತರಗೊಂಡಿರುವ ‘ಗದಾಯುದ್ಧಂ’ ಕೃತಿ   

ಬಾಗಲಕೋಟೆ: ಕವಿ ಚಕ್ರವರ್ತಿ ರನ್ನನ ‘ಗದಾಯುದ್ಧ‘ (ಸಾಹಸ ಭೀಮವಿಜಯ) ಕೃತಿ ಇಂಗ್ಲಿಷ್‌ಗೆ ಭಾಷಾಂತರಗೊಂಡಿದೆ. ಆ ಮೂಲಕ ಹಳಗನ್ನಡದಲ್ಲಿರುವ 10ನೇ ಶತಮಾನದ ಮಹಾಕಾವ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ 21ನೇ ಶತಮಾನದ ಓದುಗರಿಗೆ ತಲುಪಿಸುವ ಕಾರ್ಯವನ್ನು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕನ್ನಡ ಅಧ್ಯಯನ ಪೀಠ ಕೈಗೊಂಡಿದೆ. ಇದಕ್ಕೆ ಮುಧೋಳದ ರನ್ನ ಪ್ರತಿಷ್ಠಾನ ಕೂಡ ಕೈಜೋಡಿಸಿದೆ.

ಕನ್ನಡದ ಅಭಿಜಾತ ಕೃತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿದೆ. ಈ ಮಾಲಿಕೆಯಲ್ಲಿ ಈಗಾಗಲೇ ಶ್ರೀವಿಜಯನ ಕವಿರಾಜ ಮಾರ್ಗ ಗ್ರಂಥ ಭಾಷಾಂತರಗೊಂಡಿದೆ. ‘ಗದಾಯುದ್ಧ’ ಕೃತಿ ಎರಡನೆಯದು.

‘RANNA Gadayuddham The Duel of the Maces’ ಹೆಸರಿನಲ್ಲಿ 319 ಪುಟಗಳ ಗ್ರಂಥ ಸಿದ್ಧಗೊಂಡಿದೆ. ಭಾಷಾಂತರ ಕಾರ್ಯದ ನೇತೃತ್ವವನ್ನು ಡಾ.ಪುರುಷೋತ್ತಮ ಬಿಳಿಮಲೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಪೀಠದ ನಿರ್ದೇಶಕ ಆರ್‌.ವಿ.ಎಸ್.ಸುಂದರಮ್ ಹಾಗೂ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕಿ ಅಮ್ಮೆಲ್ ಶರೋನ್ ಪುಸ್ತಕದ ಭಾಷಾಂತರ ಮಾಡಿದ್ದಾರೆ. ಮೈಸೂರು ವಿವಿಯ ಕನ್ನಡ ಪ್ರಾಧ್ಯಾಪಕಿ ಅಕ್ಕಮಹಾದೇವಿ ಸಂ‍ಪಾದನಾ ಕಾರ್ಯ ಮಾಡಿದ್ದಾರೆ. ದೆಹಲಿಯ ಮನೋಹರ ಪಬ್ಲಿಕೇಷನ್ಸ್ ಮುದ್ರಣ ಮಾಡಿದೆ.

ADVERTISEMENT

‘ಭೀಮ-ದುರ್ಯೋಧನರ ನಡುವಿನ ಗದಾಯುದ್ಧದ ಪ್ರಸಂಗವಾದರೂ ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸಿ ಮಹಾಭಾರತದ ಕಥೆ ಯನ್ನು ಸಿಂಹಾವಲೋಕನ ಮಾಡುತ್ತದೆ. ವೀರರಸ ಪ್ರಧಾನವಾದರೂ ತಾಂತ್ರಿಕವಾಗಿ ನಾಟಕೀಯತೆ ಒಳ ಗೊಂಡಿದೆ. ಹೀಗಾಗಿಗದಾಯುದ್ಧ ಕಾವ್ಯವು ಹಳಗನ್ನಡದ ಅನರ್ಘ್ಯ ರತ್ನ‘ ಎಂದು ಜೆಎನ್‌ಯು ಕನ್ನಡ ಅಧ್ಯಯನ ‍ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಬಣ್ಣಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.