ADVERTISEMENT

ಜೀವ ಉಳಿಸುವ ಕೆಂಪು ಸೈನಿಕರು!

ರೆಡ್‌ ಕ್ರಾಸ್‌ ಸಂಸ್ಥೆ ದಿನಾಚರಣೆ ಇಂದು

ಕೆ.ನರಸಿಂಹ ಮೂರ್ತಿ
Published 8 ಮೇ 2020, 10:26 IST
Last Updated 8 ಮೇ 2020, 10:26 IST
ಲಾಕ್‌ಡೌನ್‌ನಲ್ಲಿ ಏರ್ಪಟ್ಟ ರಕ್ತದ ಕೊರತೆ ನೀಗಿಸಿದ ರೆಡ್‌ ಕ್ರಾಸ್‌ ಸ್ವಯಂಸೇವಕರು
ಲಾಕ್‌ಡೌನ್‌ನಲ್ಲಿ ಏರ್ಪಟ್ಟ ರಕ್ತದ ಕೊರತೆ ನೀಗಿಸಿದ ರೆಡ್‌ ಕ್ರಾಸ್‌ ಸ್ವಯಂಸೇವಕರು   

ಬಳ್ಳಾರಿ: ರಾಯದುರ್ಗದ ನೀಲಕಂಠ ಅವರ ಗರ್ಭಿಣಿ ಮಗಳಿಗೆ ತುರ್ತಾಗಿ ಸ್ಕ್ಯಾನಿಂಗ್‌ ಮಾಡಿಸಬೇಕಿತ್ತು. ಆದರೆ ಇದ್ದೂರಲ್ಲಿ ಸೌಕರ್ಯ ದೊರಕಲಿಲ್ಲ. ಕೂಡಲೇ ಅವರು ರೆಡ್‌ ಕ್ರಾಸ್‌ನ ಡಾ.ನಾಗರಾಜ್‌ ಅವರಿಗೆ ಕರೆ ಮಾಡಿದರು. ಹಲಕುಂದಿಯ ಅಂತರರಾಜ್ಯ ಚೆಕ್‌ಪೋಸ್ಟ್‌ ಬಳಿಗೆ ಬರಲು ಹೇಳಿದ ವೈದ್ಯರು, ಅಲ್ಲಿಗೆ ತಾವೇ ವಾಹನದೊಂದಿಗೆ ತೆರಳಿ ರೆಡ್‌ ಕ್ರಾಸ್‌ ಕಚೇರಿಗೆ ಕರೆತಂದು ಉಪಾಹಾರ ಕೊಟ್ಟರು. ನಂತರ ನಗರದ ಡಯಾಗ್ನಸ್ಟಿಕ್‌ ಸೆಂಟರ್‌ಗೆ ಕರೆದೊಯ್ದು ಸ್ಕ್ಯಾನಿಂಗ್‌ ಮಾಡಿಸಿ ಕಳಿಸಿಕೊಟ್ಟರು.

ನಗರದ ನಿವಾಸಿಯಾಗಿರುವ ನಿವೃತ್ತ ತಹಶೀಲ್ದಾರ್‌ ಜನಾರ್ದನ ಸ್ವಯಂ ತಪಾಸಣೆ ಮಾಡಿಸಿಕೊಂಡಾಗ ಅವರಿಗೆ ತಮ್ಮ ಮಧುಮೇಹ ಪ್ರಮಾಣ ಮಿತಿ ಮೀರಿದ್ದು ಕಂಡು ಬಂತು. ಕೂಡಲೇ ಅವರು ಡಾ.ನಾಗರಾಜ್‌ ಅವರಿಗೆ ಕರೆ ಮಾಡಿ ಸಹಾಯ ಕೋರಿದರು. ಮಧುಮೇಹ ತಜ್ಞ ಡಾ.ಕೊಟ್ರೇಶ್‌ ಅವರಿಗೆ ಕರೆ ಹೋಯಿತು. ಅವರೂ ಸಿದ್ಧರಾದರು. ವಾಹನ ಮತ್ತು ಸ್ವಯಂಸೇವಕರನ್ನು ನಿಯೋಜಿಸುವ ರೆಡ್‌ ಕ್ರಾಸ್‌ ಸಂಸ್ಥೆಯ ಶ್ವೇತಾ ವಾಹನ ಕಳಿಸಿದರು. ಸಕಾಲಕ್ಕೆ ಔಷಧೋಪಚಾರ ದೊರಕಿ ಜನಾರ್ದನ ಪ್ರಾಣಾಪಾಯದಿಂದ ಪಾರಾದರು.

ಕೊರೋನಾ ಕಾಲದಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯ ಸದಸ್ಯರು ಇಂಥ 39 ಮಂದಿಯ ಆಪತ್‌ ಕಾಲಕ್ಕೆ ಬಂಧುವಿನಂತೆ ನೆರವಾಗಿದ್ದಾರೆ. ನೆರವಾಗುತ್ತಿದ್ದಾರೆ.

ADVERTISEMENT

ಕಣೇಕಲ್‌ನಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿರುವ ದಾನಮ್ಮ ಅವರ 9 ವರ್ಷದ ಮಗಳು ಇಂದೂ ಅಚಾನಕ್ಕಾಗಿ ಬಿದ್ದು ಕಿವಿಯಲ್ಲಿ ರಕ್ತ ಸೋರಿತ್ತು. ಅವರೂ ಡಾ.ನಾಗರಾಜ್‌ ಅವರನ್ನು ಸಂಪರ್ಕಿಸಿದರು. ಕೂಡಲೇ ಬಳ್ಳಾರಿಗೆ ಬರಲು ಹೇಳಿದ ವೈದ್ಯರು ವಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಕಳಿಸಿದ್ದು ಇನ್ನೂ ಹಸಿರಾಗಿದೆ.

ಇದು ರೆಡ್‌ ಕ್ರಾಸ್‌ ಸದಸ್ಯರಾದ ವೈದ್ಯರ ಸೇವೆಯಷ್ಟೇ ಎಂದು ಹೇಳುವಂತಿಲ್ಲ. ರೆಡ್‌ ಕ್ರಾಸ್‌ ಸಂಸ್ಥೆಯಲ್ಲಿ ನಗರದಲ್ಲೇ ಸುಮಾರು ಏಳು ವೈದ್ಯರು ಇಂಥ ಆಪತ್‌ಕಾಲೀನ ದೂರವಾಣಿ ಮತ್ತು ಖುದ್ದು ಸೇವೆಯನ್ನು ನೀಡುತ್ತಿದ್ದಾರೆ.

‘ತುರ್ತಾಗಿ ರಕ್ತ ಬೇಕು’ ಎಂಬ ಕರೆ ಬರುತ್ತಲೇ ರೆಡ್‌ ಕ್ರಾಸ್‌ ಸದಸ್ಯ ಪ್ರದೀಪ್ ಎಲ್ಲಿದ್ದರೂ‌ ಆಸ್ಪತ್ರೆ ಕಡೆಗೆ ದೌಡಾಯಿಸುತ್ತಾರೆ. ಅಂಥವರು ನೂರಾರು ಮಂದಿ ಇದ್ದಾರೆ. ಲಾಕ್‌ಡೌನ್‌ಕಾಲದಲ್ಲೇ 19 ದಿನ ವಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ನಿಯಂತ್ರಿತ ಶಿಬಿರಗಳನ್ನು ಏರ್ಪಡಿಸಿದ ಸಂಸ್ಥೆಯು 369 ರಕ್ತದ ಯೂನಿಟ್‌ಗಳನ್ನು ಸಂಗ್ರಹಿಸಿ ರಕ್ತದ ಕೊರತೆ ನೀಗಿಸಿರುವುದು ವಿಶೇಷ. ರಕ್ತದಾನಿಗಳನ್ನು ಮನೆಯಿಂದ ಕರೆತಂದು ಮನೆಗೆ ಕರೆದೊಯ್ಯುವ ವ್ಯವಸ್ಥೆಯನ್ನೂ ಸಂಸ್ಥೆಯು ಮಾಡಿತ್ತು.

ಕೊರೊನಾ ಕಾಲದಲ್ಲಿ ಈ ಕೆಂಪು ಸೈನಿಕರು ಸಂತ್ರಸ್ತರಿಗೆ ಉಚಿತ ಆಹಾರ ಪೊಟ್ಟಣ, ಮಾಸ್ಕ್‌, ಸ್ಯಾನಿಟೈಸರ್, ದಿನಸಿ ಕಿಟ್ ವಿತರಣೆಯಿಂದ ಎಲ್ಲ ಬಗೆಯ ಸಹಾಯದ ಹಸ್ತ ಚಾಚಿದ್ದಾರೆ. ಯಾವ ನಿರೀಕ್ಷೆಯೂ ಇಲ್ಲದೆ. ಅಂದ ಹಾಗೆ, ಇವರೆಲ್ಲರೂ ಗೌರವ ಧನವಿಲ್ಲದೆ ಮನುಕುಲಕ್ಕೆ ಸೇವೆ ಸಲ್ಲಿಸುತ್ತಿರುವವರು.

‘ನನ್ನ ರಕ್ತವೂ ಕೆಂಪು, ನಿನ್ನ ರಕ್ತವೂ ಕೆಂಪು ಎಂಬ ಜಾತ್ಯತೀತ ಮತ್ತು ಧರ್ಮಾತೀಯ ನೆಲೆಯಲ್ಲಿ ರೆಡ್‌ ಕ್ರಾಸ್‌ ಕಾರ್ಯ ನಿರ್ವಹಿಸುತ್ತದೆ. ಸಂಸ್ಥೆಯ ಸ್ವಯಂಸೇವಕರೆಲ್ಲರೂ ಯಾವುದೇ ಫಲಾಪೇಕ್ಷೆ ಇಲ್ಲದೆ ತುರ್ತು ಕಾಲದಲ್ಲಿ ಹಾಜರಾಗುತ್ತಾರೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಶಕೀಬ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 380 ಸದಸ್ಯರು ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಯಂಸೇವಕರಾಗಲು ಬಯಸುವವರು ಶಕೀಬ್‌ ಅವರನ್ನು ಸಂಪರ್ಕಿಸಬಹುದು. ಅವರ ಸಂಪರ್ಕ ಸಂಖ್ಯೆ: 98451 45046

ರೆಡ್‌ ಕ್ರಾಸ್‌ ದಿನವೆಂದರೆ...

‘ಇಂಟರ್‌ ನ್ಯಾಷನಲ್‌ ಕಮಿಟಿ ಆಫ್‌ದ ರೆಡ್‌ ಕ್ರಾಸ್‌ (icrc) ಸಂಸ್ಥಾಪಕ, 1828 ರ ಮೇ 8 ರಂದು ಜನಿಸಿದ ಹೆನ್ರಿ ಡುನಾಂಟ್ ಅವರ ಜನ್ಮದಿನವನ್ನೇ ರೆಡ್‌ ಕ್ರಾಸ್‌ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಅಂತರರಾಷ್ಟ್ರೀಯ ರೆಡ್‌ ಕ್ರಾಸ್‌ ಮತ್ತು ರೆಡ್‌ ಕ್ರೆಸೆಂಟ್‌ ಚಳವಳಿಯ ತತ್ವಗಳ ಆಚರಣೆಯೂ ಹೌದು’ ಎಂದು ಶಕೀಬ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.