ADVERTISEMENT

ದರ್ಶನ್‌ ಜಾಮೀನು ಪ್ರಶ್ನಿಸಿದ್ದ ಅರ್ಜಿ: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 0:05 IST
Last Updated 2 ಏಪ್ರಿಲ್ 2025, 0:05 IST
ದರ್ಶನ್‌ 
ದರ್ಶನ್‌    

ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಆದೇಶ ಪ್ರಶ್ನಿಸಿ‌ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ನಡೆಸಲಿದೆ. 

ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ಹೈಕೋರ್ಟ್ ನಿಯಮಿತ ಜಾಮೀನು ಮಂಜೂರು ಮಾಡಿತ್ತು. ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ನಿಯಮಿತ ಜಾಮೀನು ಆದೇಶಗಳನ್ನು ಪ್ರಶ್ನಿಸಿ ವಕೀಲ ಅನಿಲ್ ನಿಶಾನಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಮೂರ್ತಿಗಳಾದ ಜೆ.ಬಿ.‍ಪಾರ್ದಿವಾಲಾ ಹಾಗೂ ಆರ್. ಮಹದೇವನ್‌ ದ್ವಿಸದಸ್ಯ ಪೀಠದೆದುರು ಮಂಗಳವಾರ ಪ್ರಸ್ತಾಪಿಸಿದರು. ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ನ್ಯಾಯಪೀಠವು ತಿಳಿಸಿತು. 

ADVERTISEMENT

2024ರ ಡಿಸೆಂಬರ್‌ 13ರಂದು ಹೈಕೋರ್ಟ್ ಏಕಸದಸ್ಯ ಪೀಠ ದರ್ಶನ್, ಪವಿತ್ರಗೌಡ ಸೇರಿದಂತೆ ಏಳು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜೂನ್ 8ರಂದು ಚಿತ್ರದುರ್ಗದ ರೇಣುಕಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಡಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.